ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಗಟ್ಟಿಯಾಗಿದೆ. 2023ಕ್ಕೆ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಗೆಲುವಿನ ಸಂಭ್ರಮದ ಬಳಿಕ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚಿಕ್ಕಮಗಳೂರು, ಮಡಿಕೇರಿಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇವೆ. ರಾಜ್ಯದಲ್ಲಿ ನಮಗೂ ಹೆಚ್ಚಿನ ಮತಗಳು ಬಂದಿವೆ. ರಾಜ್ಯದಲ್ಲಿ ಪಕ್ಷ ಬಲವರ್ಧನೆ ಆಗುತ್ತಿದೆ. ಸಾರ್ವತ್ರಿಕ ಚುನಾವಣೆಗೆ ಇದು ದಿಕ್ಸೂಚಿ ಆಗಲಿದೆ. ಮುಂದಿನ ಚುನಾವಣೆಯಲ್ಲಿ ಗೆದ್ದು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು. ಪರಿಷತ್ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆ ಇತ್ತು. 3500 ಮತಗಳು ಬರಬಹುದೆಂಬ ಊಹೆ ನಮ್ಮದಿತ್ತು. ಆದರೆ 300 ಮತಗಳು ನಮಗೆ ಜಾಸ್ತಿ ಬಂದಿವೆ. ಸಂಘಟಿತ ನೇತೃತ್ವವೇ ಇದಕ್ಕೆ ಕಾರಣ.
ಶಾಸಕರು, ಮಾಜಿ ಶಾಸಕರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷದ ಕೆಳಮಟ್ಟದ ಕಾರ್ಯಕರ್ತರು ಉತ್ಸಾಹದಿಂದ ಚುನಾವಣೆ ವೇಳೆ ಶ್ರಮಿಸಿದ್ದಾರೆ. ಹೆಚ್ಚಿನ ಅಂತರದ ಗೆಲುವಿಗೆ ಇದೆ ಕಾರಣ ಎಂದರು.
ಕೊನೆ ಘಳಿಗೆಯ ತಂತ್ರಕ್ಕೆ ಸಿಗದ ಫಲ: ಬಿಜೆಪಿ ನಾಯಕರು ಈ ಚುನಾವಣೆಯನ್ನು ಅಷ್ಟೊಂದು ಸಿರೀಯಸ್ ಆಗಿ ತೆಗೆದುಕೊಳ್ಳಲಿಲ್ಲ. ಜಿಲ್ಲೆಯ ಮಂತ್ರಿಗಳು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದರು. ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಕೂಡ ಚುನಾವಣೆ ಸಮಯದಲ್ಲಿ ಗಯಾಬ್ ಆಗಿದ್ದರು. ಇನ್ನು ಕೊನೆ ಘಳಿಗೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣೆ ಅಖಾಡಕ್ಕೆ ಇಳಿದರು. ಮುಖ್ಯಮಂತ್ರಿಗಳು 10 ದಿನಗಳು ಮೊದಲೇ ಬಂದಿದ್ದರೆ ಅವರಿಗೆ ಗೆಲುವಿನ ಫಲ ಸಿಗುತ್ತಿತ್ತು. ಕೊನೆ ಘಳಿಗೆಯಲ್ಲಿ ಅವರ ತಂತ್ರ ಫಲಿಸಲಿಲ್ಲ.
ಬಿಜೆಪಿ ಮತಗಳು ಪಕ್ಷೇತರ ಅಭ್ಯರ್ಥಿ ಕಡೆಗೆ ಹೋಗಿರಬಹುದು ಎಂಬುವುದು ನಮ್ಮ ಲೆಕ್ಕಾಚಾರ. ಇನ್ನೂ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಯುತ್ತಿದೆ. ನಾವು ಕುಸ್ತಿ ಗೆದ್ದಿದ್ದೇವೆ. ಅವರಿಬ್ಬರ ಕುಸ್ತಿಯನ್ನು ಇನ್ನು ಯಾರಾದರು ಬಿಡಿಸಬೇಕು ಅಷ್ಟೇ ಎಂದು ವ್ಯಂಗ್ಯವಾಡಿದರು. ರಮೇಶ್ ಜಾರಕಿಹೊಳಿಗೆ ಬಿಜೆಪಿ ಸೋಲಿಸಬೇಕು ಎಂಬುದೇ ಇತ್ತು. ಅವರ ಮಾತುಗಳು ಯಾವಾಗಲೂ ಉಲ್ಟಾ ಆಗಿರುತ್ತವೆ. ರಮೇಶ್ ಜಾರಕಿಹೊಳಿ ಯಾವಾಗಲೂ ಉಲ್ಟಾ ಮಾತನಾಡುತ್ತಾರೆ. ಅವರ ಡಿ ಕೋಡಿಂಗ್ ನಮಗಷ್ಟೇ ಗೊತ್ತು. ಬಿಜೆಪಿ ಸೋಲಿಸಿ ತನ್ನ ಅಧಿಪತ್ಯ ಸಾಧಿಸಬೇಕು ಎಂಬುವುದೇ ರಮೇಶ್ ಗುರಿಯಿತ್ತು. ಆದರೆ, ಪ್ರಚಾರದ ವೇಳೆ ಕಾಂಗ್ರೆಸ್ ಸೋಲಿಸಬೇಕು ಎಂದು ಅವರು ಉಲ್ಟಾ ಹೇಳುತ್ತಿದ್ದರೆಂದು ಕಾಲೆಳೆದರು.