ಬೆಳಗಾವಿ: ಸತೀಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ. ಅದಕ್ಕಾಗಿ ಸತೀಶ್ ತಾಳ್ಮೆಯಿಂದ ಇರಬೇಕು. ಕುಟುಂಬದ ವಿಚಾರಕ್ಕೆ ಬಂದ್ರೆ, ಜಾರಕಿಹೊಳಿ ಸಹೋದರೆಲ್ಲರೂ ಒಂದೇ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ನಗರದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲಖನ್ನಿಂದ ಗೋಕಾಕ್ ನಗರಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಈಗ ಸತೀಶ್ ಹಾಗೂ ಲಖನ್ ಏನೇನೋ ಮಾತನಾಡುತ್ತಿದ್ದಾರೆ. ಕುಟುಂಬದ ಹಿರಿಯ ಸದಸ್ಯ ನಾನು. ಸಹೋದರರು ಏನೇ ಅನ್ಯಾಯ ಮಾಡಿದರೂ ಮನೆಯ ಹಿರಿಯನಾಗಿ ಅದನ್ನು ನುಂಗಲೇ ಬೇಕು. ಸತೀಶ್ ಜಾರಕಿಹೊಳಿ 20 ವರ್ಷದಲ್ಲಿ ಮಾಡದೇ ಇರೋದು ನಾನು 2 ವರ್ಷದಲ್ಲಿ ಮಾಡಿದ್ದೇನೆ. ಒಳ್ಳೆಯದಕ್ಕಾಗಿ ನಾನು ಹಠ ಮಾಡುತ್ತೇನೆ ಎಂದರು.
ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿ ಹೊಂದಲ್ಲ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ರಾಜಕೀಯ ಸಾಕು ಅನ್ನಿಸಿದ್ರೆ ಬಿಜೆಪಿಯಲ್ಲಿ ನಿವೃತ್ತಿ ಆಗಲಿದ್ದೇನೆ. ರಾಜಕೀಯ ಶಕ್ತಿ ಕೊಟ್ಟಿದ್ದು ಅಥಣಿ ಕ್ಷೇತ್ರ, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ ಎಂದರು.
ಮಾಧ್ಯಮದ ಮುಂದೆ ಮಾತನಾಡದಿರಲು ಆರ್ ಎಸ್ ಎಸ್ ಮುಖಂಡರೊಬ್ಬರು ಸಲಹೆ ನೀಡಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ಸಿಟ್ಟಿನಿಂದ ಏನಾದ್ರು ಮಾತನಾಡುತ್ತಾನೆ ಎಂದು ಭಾವಿಸಿದ್ದರೆ ತಪ್ಪು. ನಾನು ಒಂದು ವರ್ಷದಿಂದ ಬಹಳಷ್ಟು ಕಲಿತಿದ್ದೇನೆ. ಮಹೇಶ್ ಕುಮಟಳ್ಳಿ, ಶಂಕರ್, ಪ್ರತಾಪ್ ಗೌಡ ಪಾಟೀಲ್ ಹಾಗೂ ಮುನಿರತ್ನ ನನ್ನ ಜತೆಗೆ ಮಂತ್ರಿ ಆಗಬೇಕಿತ್ತು. ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದೆ. ಅದು ಆಗದಿದ್ದಾಗ ಪ್ರಮಾಣ ವಚನ ಸಮಾರಂಭಕ್ಕೆ ಗೈರಾಗಲು ನಿರ್ಧರಿಸಿದ್ದೆ. ಸಚಿವ ಸ್ಥಾನ ತಿರಸ್ಕರಿಸಿ ಗೋಕಾಕ್ಗೆ ಹೊರಟಿದ್ದೆ. ಮಹೇಶ್ ಕುಮಟಹಳ್ಳಿ ನನ್ನ ಕಾಲಿಗೆ ನಮಸ್ಕರಿಸಿದರು. ಮಹೇಶ್ ಕುಮಟಳ್ಳಿ, ಬಾಲಚಂದ್ರ ಮನವಿ ಮಾಡಿಕೊಂಡಿದಕ್ಕೆ ನಾನು ಸಚಿವನಾದೆ. ನಾನು ಸಿಎಂ ಬಿ.ಎಸ್. ಯಡಿಯೂರಪ್ಪ, ಅಮಿತ್ ಶಾ ಇಬ್ಬರನ್ನೂ ನಂಬಿದ್ದೇನೆ. ನೀರಾವರಿ ಕೊಡುತ್ತಾರೋ, ಲೈಬ್ರರಿ ಕೊಡುತ್ತಾರೋ ಗೊತ್ತಿಲ್ಲ ಎಂದರು.
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ದೊಡ್ಡ ಚರ್ಚೆಯೇ ನಡೆಯುತ್ತಿದೆ. ಮುಸ್ಲಿಂ ಸಮಾಜ ಹೆದರುವ ಪ್ರಶ್ನೆಯೇ ಇಲ್ಲ, ಲೋಪದೋಷ ಇದ್ರೆ ನಾನು, ರಾಜ್ಯದ ನಾಯಕರ ಜತೆ ಚರ್ಚೆಗೆ ಸಿದ್ಧನಿದ್ದೇನೆ ಎಂದರು.