ಬೆಳಗಾವಿ: ಅನಗೋಳದ ಕನಕದಾಸ ಕಾಲೋನಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಭಗ್ನಗೊಂಡ ಜಾಗದಲ್ಲಿಯೇ ಈ ಹೊಸ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಕ್ಷೀರಾಭಿಷೇಕದೊಂದಿಗೆ ಪೂಜೆ ಸಲ್ಲಿಸಲಾಗಿದೆ.
ಪ್ರತಿಷ್ಠಾಪನೆಗೆ ಮೊದಲು, ಮಹಿಳೆಯರು ಕುಂಭ ಹೊತ್ತು ಮೆರವಣಿಗೆ ಮಾಡಿದರು. ಬಳಿಕ ಜಲಾಭೀಷೇಕ, ಕ್ಷೀರಾಭಿಷೇಕ ನೆರವೇರಿಸಿದರು. ಬಳಿಕ ರಾಯಣ್ಣ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಜೈ ಜೈ ರಾಯಣ್ಣ.. ಜೈ ಜೈ ಚೆನ್ನಮ್ಮ ಎಂದು ಘೋಷಣೆ ಕೂಗಿದರು. 'ಯಾರಪ್ಪಂದ್ ಏನೈತಿ.. ಬೆಳಗಾವಿ ನಮ್ದೈತಿ' ಎಂದು ಘೋಷಣೆ ಕೂಗಿದರು.
ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ:
ರಾಯಣ್ಣ ಹೊಸ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮೂರ್ತಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಸರ್ಕಾರಿ ಮತ್ತು ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಸರ್ಕಾರದ ಆಸ್ತಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪವಿದೆ.
ಇದಲ್ಲದೇ ಆನಗೋಳದಲ್ಲಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿದ್ದರು. ಈ ಘಟನೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಪೀರನವಾಡಿ ಗ್ರಾಮದಿಂದ ಆನಗೋಳದವರೆಗೆ ಬೈಕ್ ರ‍್ಯಾಲಿ ನಡೆಸಿ ಮೂರ್ತಿ ಭಗ್ನಗೊಂಡ ಜಾಗದಲ್ಲಿಯೇ ಹೊಸ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಂಡಿದ್ದರು.
ಅದಕ್ಕಾಗಿ 6 ಅಡಿ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನ ಆನಗೋಳದಲ್ಲಿ ತಂದಿಟ್ಟಿದ್ದರು. ಕನಕದಾಸ ಕಾಲೋನಿಯಲ್ಲಿ ಗ್ರಾಮಸ್ಥರು ಸೇರಿಕೊಂಡು ಹೊಸದಾಗಿ ತಂದಿರುವ ಮೂರ್ತಿಗೆ ಪೂಜೆ ಸಲ್ಲಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಸದ್ಯ ಆನಗೋಳದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ಇತ್ತ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಸೇರಿದ್ದ ನೂರಾರು ಕರವೇ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸುವುದಾಗಿ ಪಟ್ಟು ಹಿಡಿದಿದ್ದರು. ರ‍್ಯಾಲಿಗೆ ಅವಕಾಶ ನೀಡದ ಪೊಲೀಸರು ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಬೈಕ್ ರ‍್ಯಾಲಿಗೆ ಪಟ್ಟು: ನೂರಾರು ಮಂದಿ ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ