ಬೆಳಗಾವಿ: ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಪುಡಿ ರೌಡಿಗಳು ದಾಂಧಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ. ಧಾರವಾಡ ರಸ್ತೆಯಲ್ಲಿರುವ ಗ್ರೀನ್ ಗಾರ್ಡನ್ ರೆಸ್ಟೋರೆಂಟ್‌ನಲ್ಲಿ ಈ ಕೃತ್ಯ ನಡೆದಿದೆ. ನಿನ್ನೆ ರಾತ್ರಿ ನಡೆದ ಕೃತ್ಯ ರೆಸ್ಟೋರೆಂಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕ್ಷುಲ್ಲಕ ಕಾರಣಕ್ಕಾಗಿ ಆರಂಭಗೊಂಡಿರುವ ಜಗಳದಲ್ಲಿ ಪುಡಿರೌಡಿಯೋರ್ವ ರೆಸ್ಟೋರೆಂಟ್ ಕ್ಯಾಶರ್‌ಗೆ ಕಪಾಳಮೋಕ್ಷ ಮಾಡಿದ್ದಾನೆ. ಹೊಡೆತದಿಂದ ಕ್ಯಾಶರ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಇತರೆ ಸಿಬ್ಬಂದಿಯಿಂದ ಕ್ಯಾಶರ್‌ಗೆ ಆರೈಕೆ ಮಾಡಲಾಗಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಕಿ ಹಚ್ಚುವ ಬೆದರಿಕೆ: ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚುವುದಾಗಿ ಪುಡಿರೌಡಿಗಳು ಬೆದರಿಕೆಯೊಡ್ಡಿದ್ದಾರೆ. ರಾತ್ರಿ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಪೊಲೀಸ್ ಠಾಣೆಗೆ ಹೋಗಿದ್ದಕ್ಕೆ ತಡರಾತ್ರಿ ವಾಪಸ್ ಬಂದಿರುವ ಪುಡಿರೌಡಿಗಳು ಸಿಬ್ಬಂದಿ ಮೇಲೆ ಹಲ್ಲೆಗೈದು ದುಷ್ಕೃತ್ಯವೆಸಗಿದ್ದಾರೆ.
ರೌಡಿಶೀಟರ್ ರಘು ಬೈಲವಾಡ, ರಾಜು ಕಡಕೋಳ, ವಿಠ್ಠಲ ಹುಕ್ಕೇರಿ ಸೇರಿ ಇತರರು ದಾಂಧಲೆ ನಡೆಸಿದ್ದಾರೆ. ಕೃತ್ಯ ಎಸಗಿದ ಎಲ್ಲ ಆರೋಪಿತರು ಬೈಲಹೊಂಗಲ ಪಟ್ಟಣದ ನಿವಾಸಿಗಳೆಂದು ತಿಳಿದು ಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.