ಬೆಳಗಾವಿ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ನಿನ್ನೆ ನೀಡಿದ್ದ ಅತ್ಯಾಚಾರ ಹೇಳಿಕೆಯು ಕಾಂಗ್ರೆಸ್ ಪಕ್ಷದ ಹೇಳಿಕೆ ಎಂದು ಭಾವಿಸುತ್ತೇನೆ ಅಂತಾ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ರಮೇಶ್ ಕುಮಾರ್ ಹಿರಿಯ ರಾಜಕಾರಣಿ, ಅವರಿಗೆ ಅಪಾರವಾದ ಅನುಭವ ಇದೆ. ನಿನ್ನೆ ಸದನದಲ್ಲಿ ಅಸಂಬದ್ಧ ಪದ ಬಳಸಿ ಮಹಿಳಾ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಡಿಕೆಶಿ, ಸಿದ್ದರಾಮಯ್ಯನವರು ಕೂಡಲೇ ರಮೇಶ್ ಕುಮಾರ್ ಅವರನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಮಹಿಳಾ ಸಮಾಜಕ್ಕೆ ಅವಮಾನ ಮಾಡುವಂತಹ ಹೇಳಿಕೆ:
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಉದ್ಧಟತನದ್ದಾಗಿದೆ. ಮಾಜಿ ಸ್ಪೀಕರ್ ಆಗಿದ್ದ ಅವರು ಇಡೀ ಮಹಿಳಾ ಸಮಾಜಕ್ಕೆ ಅವಮಾನ ಮಾಡುವಂತ ಹೇಳಿಕೆ ನೀಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಈ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಕಿಡಿ ಕಾರಿದರು.
ಓದಿ: ಅತ್ಯಾಚಾರದ ಕುರಿತ ಹೇಳಿಕೆ.. ಮಹಿಳೆಯರಿಗೆ ನೋವಾಗಿದ್ರೇ ಪ್ರಾಮಾಣಿಕವಾಗಿ ಕ್ಷಮೆ ಕೋರುವೆ.. ರಮೇಶ್ ಕುಮಾರ್
ಮಹಿಳೆಯರ ಕ್ಷಮೆ ಕೇಳಬೇಕು : ಅಂಜಲಿ ನಿಂಬಾಳ್ಕರ್
ನಿನ್ನೆ ಸದನದಲ್ಲಿ ರೇಪ್ ವಿಚಾರದ ಬಗ್ಗೆ ಚರ್ಚೆಯಾಗಿರುವುದು ಬಹಳ ಖಂಡನೀಯ. ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಅಂತಾ ಏನು ಇಲ್ಲ. ಮಹಿಳೆಯರ ವಿಷಯ ಅಂತಾ ಬಂದಾಗ ಎಲ್ಲಾರು ಒಟ್ಟಾಗಿ ಇರುತ್ತೇವೆ. ರಮೇಶ್ ಕುಮಾರ್ ಇಡೀ ಸದನಕ್ಕೆ ಕ್ಷಮೆ ಕೇಳಬೇಕು.
ಸದನದಲ್ಲಿ ಯಾರು ಈ ರೀತಿ ಮಾತನಾಡಬಾರದು. ಇದರಿಂದ ಮಹಿಳೆಯರಿಗೆ ನೋವಾಗುತ್ತದೆ ಎಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ವಿಷಾದ ವ್ಯಕ್ತಪಡಿಸಿದರು.