ಅಥಣಿ (ಬೆಳಗಾವಿ): ರಮೇಶ ಜಾರಕಿಹೊಳಿ ಮುಂಬೈಗೆ ಹೋಗಿಲ್ಲ, ಕ್ಷೇತ್ರದಲ್ಲೇ ಇದ್ದಾರೆ. ಮಾಧ್ಯಮಗಳಲ್ಲಿ ಊಹಾಪೋಹದ ಸುದ್ದಿ ಬಿತ್ತರಿಸಲಾಗುತ್ತಿದೆ ಎಂದು ಅಥಣಿ ಶಾಸಕ ಮಹೇಶ ಕುಮಟಳ್ಳಿ ಹೇಳಿದರು.
ಅಥಣಿ ಪಟ್ಟಣದಲ್ಲಿರುವ ಸ್ವಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ ಜಾರಕಿಹೊಳಿ ಎಲ್ಲೂ ಹೋಗಿಲ್ಲ, ಅವರು ಕ್ಷೇತ್ರದಲ್ಲೇ ಇದ್ದಾರೆ. ನಾನು ಕೂಡ ಮತ್ತೆ ಮುಂಬೈಗೆ ಹೋಗಿದ್ದೇನೆ ಎಂಬ ಸುದ್ದಿಗಳು ಬರುತ್ತಿವೆ. ಆದರೆ, ನಾನು ಅಥಣಿ ಕ್ಷೇತ್ರದಲ್ಲೇ ಇದ್ದೇನೆ. 15 ಶಾಸಕರು ಕೂಡ ಅವರವರ ಕ್ಷೇತ್ರದಲ್ಲಿ ಇರಬಹುದು, ಅವರನ್ನು ನೀವೇ ಕೇಳಿ ಎಂದರು.
17 ಶಾಸಕರಿಂದ ಬಿಜೆಪಿ ಸರ್ಕಾರದಲ್ಲಿ ಗೊಂದಲವಾಗಿದೆ ಎಂಬ ಸಚಿವ ಕೆ.ಎಸ್. ಈಶ್ವರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ನಮ್ಮ ಹಿರಿಯರು. ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ. ಅವರ ಇಲಾಖೆಯಲ್ಲಿ ನಮ್ಮ ಕ್ಷೇತ್ರಕ್ಕೆ ಬೇಕಾದ ಕೆಲಸಗಳನ್ನು ಮುತುವರ್ಜಿಯಿಂದ ಮಾಡುತ್ತಾರೆ. ಅವರು ಬೇರೆ ಅರ್ಥದಲ್ಲಿ ಆ ರೀತಿ ಮಾತನಾಡಿಲ್ಲ ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ. ಸುಮ್ಮನೆ ವದಂತಿಗಳು ಹರಿದಾಡುತ್ತಿವೆ. ಮೊನ್ನೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಅದಕ್ಕೆಲ್ಲ ತೆರೆ ಎಳೆದಿದ್ದಾರೆ. ನಮ್ಮ ಬೆಂಬಲ ಯಡಿಯೂರಪ್ಪ ಅವರಿಗೆ ಎಂದು ತಿಳಿಸಿದರು.
ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಶ್ರೀಮಂತ ಪಾಟೀಲ ಅವರ ಸಚಿವ ಸ್ಥಾನ ಅಥಣಿ ಶಾಸಕರಿಗೆ ಸಿಗಲಿದೆ ಎಂಬ ವಿಚಾರವಾಗಿ ಮಾತನಾಡಿದ ಕುಮಟಳ್ಳಿ, ಶ್ರೀಮಂತ ಪಾಟೀಲ ತಮ್ಮ ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸಚಿವ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದರು.
ಇದನ್ನೂ ಓದಿ: ಸೀಟು ಹಿಡಿಯಲು ಮುಗಿಬಿದ್ದ ಪ್ರಯಾಣಿಕರು; ಕೊರೊನಾ ಹಾಟ್‌ಸ್ಪಾಟ್ ಆಗ್ತಿದೆಯೇ BMTC ಬಸ್ ಸ್ಟಾಪ್?