ಅಥಣಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಥಣಿಯ ಹಿರಿಯ ಆರ್‌ಎಸ್‌ಎಸ್ ಮುಖಂಡರನ್ನು ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದರು.
ಸಿಂದಗಿ, ಹಾನಗಲ್ ವಿಧಾನಸಭೆ ಉಪಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳನ್ನ ಭರ್ತಿ ಮಾಡಲಾಗುತ್ತದೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ರಮೇಶ್ ಜಾರಕಿಹೊಳಿ ಅವರ ಈ ಭೇಟಿ ಮಹತ್ವ ಪಡೆದಿದೆ.
ಕಳೆದ ವಾರದ ಹಿಂದೆಯಷ್ಟೇ ಮಾಜಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ದೆಹಲಿ ವರಿಷ್ಠರನ್ನು ಭೇಟಿಯಾಗಿ ನೇರವಾಗಿ ಅಥಣಿ ಹಿರಿಯ ಆರ್‌ಎಸ್‌ಎಸ್ (ಸಂಘ ಪರಿವಾರದ ಉತ್ತರ ಕರ್ನಾಟಕ ಪ್ರಾಂತ್ಯ ಸಂಚಾಲಕ) ಮುಖಂಡರಾದ ಅರವಿಂದ್ ದೇಶಪಾಂಡೆ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಕೆಲ ದಿನಗಳ ಹಿಂದಷ್ಟೇ ಅವರನ್ನು ಭೇಟಿ ಮಾಡಿದ್ದರು. ಇದೀಗ ಮತ್ತೆ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಜನವರಿ 26ರ ನಂತರ ಮನೆ ಬಾಗಿಲಿಗೆ ಪಡಿತರ: ಸಿಎಂ ಬೊಮ್ಮಾಯಿ
ಇನ್ನು, ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದೆ ಸಾಗಿದರು. ವಾರದ ಹಿಂದೆ ರಮೇಶ್ ಜಾರಕಿಹೊಳಿ ಅವರ ಸ್ನೇಹಿತ ಕಿರಣ್ ಗೌಡ ಪಾಟೀಲ್ ನಿಧನ ಹೊಂದಿರುವ ಹಿನ್ನೆಲೆ ತಾಲೂಕಿನ ನಂದಗಾಂವ್ ಗ್ರಾಮಕ್ಕೆ ಸ್ನೇಹಿತನ ಮನೆಗೆ ಸಾಂತ್ವನ ಹೇಳಲು ತೆರಳಿದರು. ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ರಮೇಶ್ ಜಾರಕಿಹೊಳಿ ಅವರಿಗೆ ಸಾಥ್ ನೀಡಿದರು.