ಚಿಕ್ಕೋಡಿ: ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿಲ್ಲ, ಅವರ ರಾಜೀನಾಮೆ ಅಧಿಕೃತವಲ್ಲವೆಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಹಾಗಾಗಿ ರಮೇಶ್ ಜಾರಕಿಹೊಳಿ ಇನ್ನೂ ಕಾಂಗ್ರೆಸ್ನಲ್ಲೇ ಇದ್ದಾರೆ ಎಂದು ಸಕ್ಕರೆ ಸಚಿವ ಆರ್ ಬಿ ತಿಮ್ಮಾಪೂರ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪ್ರವಾಸ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತ, ಅವರ ಮನವೊಲಿಸುವ ಅಗತ್ಯ ಇಲ್ಲ. ರಮೇಶ್ ಜಾರಕಿಹೊಳಿ ಕಾಂಗ್ರೆಸಿಗ, ಅವರು ಕಾಂಗ್ರೆಸ್ನಲ್ಲೇ ಇರುತ್ತಾರೆ ಎಂದರು.
ಇನ್ನು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜೀನಾಮೆ ಪರ್ವ ಮುಕ್ತಾಯವಾಗಿದೆ. ಮೈತ್ರಿ ಸರ್ಕಾರ ರಚನೆ ಆದಾಗಿನಿಂದಲೂ ಬಿಜೆಪಿಯವರು ಸರ್ಕಾರ ಪತನ ಆಗುತ್ತೆ ಅನ್ನುತ್ತಿದ್ದಾರೆ. ಆದರೆ ಈವರೆಗೂ ಆಗಿಲ್ಲ. ಇನ್ನು ಮಹೇಶ್ ಕುಮಟಳ್ಳಿ ರಾಜೀನಾಮೆ ವಿಚಾರ ಸುಳ್ಳು. ಊಹಾಪೋಹಗಳಿಗೆ ಬೆಲೆ ಕೊಡಬೇಡಿ. ಕುಮಟಳ್ಳಿ ಕಾಂಗ್ರೆಸ್ ಬಿಟ್ಟು ಹೋಗೋದಿಲ್ಲ ಎಂದು ತಿಮ್ಮಾಪೂರ ವಿಶ್ವಾಸ ವ್ಯಕ್ತಪಡಿಸಿದರು.