ಬೆಳಗಾವಿ: ಈ ಸಲ ರಾಜ್ಯಸಭೆ ಮೆಟ್ಟಿಲೇರಲು ಹಾಲಿ ಸದಸ್ಯ ಡಾ. ಪ್ರಭಾಕರ ಕೋರೆ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಕಸರತ್ತು ನಡೆಸಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಬಣ ರಾಜಕೀಯ ಕೂಡ ತೀವ್ರ ಸ್ವರೂಪ ಪಡೆದುಕೊಂಡಿದೆ.
ರಮೇಶ ಕತ್ತಿ ಪರ ಒಂದು ಗುಂಪು ಲಾಬಿ ನಡೆಸುತ್ತಿದ್ದರೆ, ಡಾ. ಪ್ರಭಾಕರ ಕೋರೆ ಪರ ಮತ್ತೊಂದು ಗುಂಪಿನ ಬ್ಯಾಟಿಂಗ್ ಶುರುವಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಗಡಿ ಜಿಲ್ಲೆಯಲ್ಲಿ ಬಣ ರಾಜಕೀಯವೂ ಜೋರಾಗಿದೆ. ಡಿಸಿಎಂ ಲಕ್ಷಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ ಕೋರೆ ಪರ ಬ್ಯಾಟಿಂಗ್ ಮಾಡುತ್ತಿದ್ರೆ, ಜಾರಕಿಹೊಳಿ ಸಹೋದರರು ಕತ್ತಿ ಪರ ಲಾಬಿ ಮಾಡ್ತಿದ್ದಾರೆ.
ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಬೆಂಬಲಕ್ಕೆ ಸಚಿವ ರಮೇಶ್ ಜಾರಕಿಹೊಳಿ, ಸಚಿವ ಶ್ರೀಮಂತ ಪಾಟೀಲ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಮಹೇಶ್ ಕುಮಟಳ್ಳಿ, ದುರ್ಯೋಧನ ಐಹೊಳೆ, ಮಹಾದೇವಪ್ಪ ಯಾದವಾಡ, ಅಭಯ್ ಪಾಟೀಲ್ ನಿಂತಿದ್ದಾರೆ.
ಡಾ. ಪ್ರಭಾಕರ ಕೋರೆ ಬೆಂಬಲಕ್ಕೆ ಕೇಂದ್ರ ಸಚಿವ ಸುರೇಶ್ ಅಂಗಡಿ, ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಬ್ ಜೊಲ್ಲೆ, ಶಾಸಕರಾದ ಅನಿಲ್ ಬೆನಕೆ ಪಿ.ರಾಜೀವ್, ಮಹಾಂತೇಶ ದೊಡಗೌಡರ, ಆನಂದ ಮಾಮನಿ ಹಾಗೂ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಲಾಬಿ ನಡೆಸಿದ್ದಾರೆ.