ಬೆಂಗಳೂರು: ಪರಿಷತ್ ಕಲಾಪದಲ್ಲಿ ಧನವಿನಿಯೋಗ ವಿಧೇಯಕದ ಮೇಲಿನ ಚರ್ಚೆಯ ಅವಧಿ ಕೆಲ ಸದಸ್ಯರ ವಿಧಾಯದ ಭಾಷಣಕ್ಕೆ ತಿರುಗಿತು. ಕಾಂಗ್ರೆಸ್ ಸದಸ್ಯ ರಘು ಆಚಾರ್ ವಿದಾಯದ ಭಾಷಣದ ವೇಳೆ ಪರಿಷತ್ ಘನತೆ ಕುಸಿದಿರುವ ಕುರಿತ ಹೇಳಿಕೆ ಪರಿಷತ್‌ನಲ್ಲಿ ಕಿಡಿ ಹೊತ್ತಿಸಿದ್ದು, ಅಂತಿಮವಾಗಿ ಅವರ ಸದನದ ಕ್ಷಮೆ ಯಾಚಿಸಿದ ಪ್ರಸಂಗವು ನಡೆಯಿತು.
ವಿಧಾನ ಪರಿಷತ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂರಕ ಅಂದಾಜುಗಳ ಧನವಿನಿಯೋಗ ವಿಧೇಯಕ ಮಂಡಿಸಿದರು. ಇದರ ಮೇಲಿನ ಚರ್ಚೆ ವೇಳೆ ಮಾತನಾಡಿದ
ಬಿಜೆಪಿ ಸದಸ್ಯ ಮಹಾಂತೇಶ್ ಕವಟಗಿಮಠ, ಮೋದಿ, ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಸೇರಿದಂತೆ ನಾಯಕರ ಕಾರಣದಿಂದ ಎರಡು ಬಾರಿ ಪರಿಷತ್ ಸದಸ್ಯನಾಗಿದ್ದು, ನನಗೆ ಮೂರನೇ ಬಾರಿಯೂ ಅವಕಾಶ ನೀಡಿತ್ತು.
ಆದರೆ, ಪ್ರವೇಶ ಮಾಡಲು ಆಗಲಿಲ್ಲ. ಪಕ್ಷದ ಹಿರಿಯರು ಆಶೀರ್ವದಿಸಿದಲ್ಲಿ ಮತ್ತೆ ಈ ಸದನಕ್ಕೆ ಪ್ರವೇಶ ಮಾಡುತ್ತೇನೆ. ಸದನದ ಹೊರಗೆ ಒಳಗೆ ಸ್ಥಳೀಯ ಸಂಸ್ಥೆ ಪ್ರತಿನಿಧಿಯಾಗಿ ನ್ಯಾಯವೊದಗಿಸುವ ಕೆಲಸ ಮಾಡಿದ್ದೇನೆ ಎಂದು ಬಸವಣ್ಣನವರ ವಚನ ಉಲ್ಲೇಖಿಸಿ ವಿದಾಯದ ಭಾಷಣ ಮುಗಿಸಿದರು.
'ಪರಿಷತ್ ಬರುಬರುತ್ತಾ ಘನತೆ ಕಡಿಮೆ ಮಾಡಿಕೊಳ್ಳುತ್ತಿದೆ'
ಕಾಂಗ್ರೆಸ್‌ನ ರಘು ಆಚಾರ್ ಮಾತನಾಡಿ, ಸೋನಿಯಾಗಾಂಧಿ, ಸಿದ್ದರಾಮಯ್ಯ ಅವರಂತಹ ನಾಯಕರು ಅವಕಾಶ ಕೊಟ್ಟಿದ್ದಕ್ಕೆ ಎರಡು ಬಾರಿ ಪರಿಷತ್‌ಗೆ ಆಯ್ಕೆಯಾಗಿದ್ದೆ. ಈಗ ಸ್ಪರ್ಧೆ ಮಾಡಲಿಲ್ಲ, ಮೊದಲೆಲ್ಲಾ ಚಿಂತಕರ ಚಾವಡಿ ಆಗಿದ್ದ ಮೇಲ್ಮನೆ ಈಗ ಬರುಬರುತ್ತಾ ಘನತೆ ಕಡಿಮೆ ಮಾಡಿಕೊಳ್ಳುತ್ತಿದೆ. ಹಿಂದೆ ಆರೋಪ ಬಂದರೆ ಅಂತಹ ಸಚಿವರು ರಾಜೀನಾಮೆ ನೀಡುತ್ತಿದ್ದರು. ಆದರೆ, ಈಗ ಅಂತಹ ಕಾಲ ಇಲ್ಲ, ಸದನದಲ್ಲಿ ಬರೀ ಗದ್ದಲ ಮಾತ್ರ ಇರುತ್ತೆ, ಇಲ್ಲಿ ಹೇಳಿದರೆ ಕೇಳುವ ಕಿವಿ ಇರಲ್ಲ ಎಂದರು.
ಇದಕ್ಕೆ ಪುಟ್ಟಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಆಗ ಎದ್ದು ನಿಂತ ಸಿಎಂ ಬೊಮ್ಮಾಯಿ, ಎಲ್ಲಾ ಅನುಭವಿಸಿ ಈಗ ಹೇಳುತ್ತಿದ್ದೀಯಲ್ಲಪ್ಪ, ಮೊದಲೇ ಭಾಷಣ ಮಾಡಿದ್ದರೆ ಏನಾದರೂ ಉಪಯೋಗ ಇರುತ್ತಿತ್ತು ಕಡೆಯ ದಿನ ಮಾತಾಡುತ್ತಿದ್ದೀಯ, ಕೆಳಮನೆಗೆ ಹೋಗಬೇಕು ಎನ್ನುತ್ತಿದ್ದೀಯ ಅಲ್ಲಿಯೂ ಕಡೆ ದಿನ ಮಾತನಾಡಬೇಡ ಎಂದು ಸಲಹೆ ನೀಡಿ ಕಾಲೆಳೆದರು. ನಂತರ ಮಾತನಾಡಿದ ಪುಟ್ಟಣ್ಣ ,ವ್ಯವಸ್ಥೆ ಹಾಳಾಗಿದೆ ಎನ್ನುತ್ತಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ರೀತಿ ಗೆದ್ದಿದ್ದರೆ ಒಪ್ಪಬಹುದಿತ್ತು ಎಂದರು. ಅದಕ್ಕೆ ನಾನು ಹಣ ಖರ್ಚು ಮಾಡಿಯೇ ಮಾತನಾಡಿದ್ದೇನೆ ಎಂದರು.
ಅಲ್ಲಿ ಹೋಗಿ ಏನು ಮಾಡುತ್ತೀರಾ?
ನಂತರ ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ರಘು ಆಚಾರ್ ಅವರಿಗೆ ಬಹಳ ಮಹನೀಯರು ಬಂದು ಹೋಗಿದ್ದ ಜಾಗದಲ್ಲಿ ನಿಂತು ಮಾತನಾಡುತ್ತಿದ್ದೇನೆ ಎನ್ನುವ ಪ್ರಜ್ಞೆ ಇರಬೇಕಿತ್ತು. ಅವರು ಸಭೆಗೆ ಅವಮಾನ ಮಾಡಿದ್ದಾರೆ, ಬಹಳ ಜನ ಹೋರಾಟದ ಹಿನ್ನೆಲೆಯಲ್ಲಿ ಬಂದಿದ್ದೇವೆ. ಹೆಲಿಕ್ಯಾಪ್ಟರ್‌ನಲ್ಲಿ ಹೋಗಿ ಪ್ರಚಾರ ಮಾಡಿಲ್ಲ, ಪೊಲೀಸರ ಲಾಠಿ ಏಟು ತಿಂದಿದ್ದೇವೆ, ಆದರೆ ರಘು ಆಚಾರ್ ಈಗ ಅವಧಿ ಮುಗಿಸಿ ಹೋಗುವಾಗ ಇಂತಹ ಮಾತು ಆಡಿರುವುದು ಅವರಿಗೆ ಅವರು ಮಾಡಿಕೊಳ್ಳುತ್ತಿರುವ ಅವಮಾನ, ಇಲ್ಲಿಂದ ವಿಧನಾಸಭೆಗೆ ಹೋಗುವ ಘೋಷಣೆ ಮಾಡಿದ್ದಾರೆ ಎಂದರು.
ಅಲ್ಲಿ ಹೋಗಿ ಏನು ಮಾಡುತ್ತೀರಾ? ಕಣ್ಣ ಮುಂದೆ ಗುರಿ ಇರಬೇಕು, ಆದರೆ ಯಾವ ಯಾವುದೋ ಮಾರ್ಗದ ಮೂಲಕ ಸದನದ ಒಳಗೆ ಬಂದಾಗ ಇಂತಹ ಮಾತುಗಳು ಬರುತ್ತವೆ. ಪರಂಪರಗೆ ಅವಮಾನ ಮಾಡುವ ಮಾತನಾಡಿದ್ದಾರೆ. ಹೀಗಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಕೂಡಲೇ ಎಚ್ಚೆತ್ತ ರಘು ಆಚಾರ್, ನನ್ನ ಮಾತಿನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ವಿವಾದಕ್ಕೆ ತೆರೆ ಎಳೆದರು.
ಇದನ್ನೂ ಓದಿ: ವಿಧಾನಸಭಾ ಕಲಾಪದ ಪ್ರಶ್ನೋತ್ತರ ವೇಳೆ ಸದನದಲ್ಲಿ ಶಾಸಕರ ಗೈರು : ಸ್ಪೀಕರ್ ಅಸಮಾಧಾನ