ಅಥಣಿ: ರಾಜ್ಯದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸ್ವ ಕ್ಷೇತ್ರ ಅಥಣಿ ತಾಲೂಕಿನ ಹಲವಾರು ಗ್ರಾಮಗಳ ತೋಟದ ಮನೆಗಳಲ್ಲಿ ವಾಸಿಸುತ್ತಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬಾಳಲ್ಲಿ ವಿದ್ಯುತ್ ಇಲಾಖೆ ಚೆಲ್ಲಾಟ ಆಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ದಿನಾಂಕ ಈಗಾಗಲೇ ಪ್ರಕಟವಾಗಿದೆ. ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ವ್ಯಾಸಂಗ ಮಾಡುವ ಹಿತದೃಷ್ಟಿಯಿಂದ ಆನ್ಲೈನ್ ತಂತ್ರಾಂಶಗಳು ಹಾಗೂ ಚಂದನ ವಾಹಿನಿ ಮೂಲಕ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವಾಣಿ ಎಂಬ ಕಾರ್ಯಕ್ರಮದ ಮೂಲಕ ಪಠ್ಯ, ಪಾಠಗಳನ್ನು ಬೋಧನೆ ಮಾಡಲಾಗುತ್ತಿದೆ. ಆದರೆ ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಂದು ವಾರಗಳ ಕಾಲ ಹಗಲು ಹೊತ್ತಿನಲ್ಲಿ ವಿದ್ಯುತ್ ಇದ್ದರೆ, ಒಂದು ವಾರ ರಾತ್ರಿ ಸಮಯದಲ್ಲಿ ವಿದ್ಯುತ್ ಸಂಪರ್ಕ ಇರುತ್ತದೆ. ಜೊತೆಗೆ ಹಗಲಿನ ಕೆಲ ಸಂದರ್ಭಗಳಲ್ಲಿ ಪವರ್ ಕಟ್ ಆಗುತ್ತಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮಧ್ಯಾಹ್ನ ಮೂರು ಗಂಟೆಯಿಂದ ನಾಲ್ಕೂವರೆ ಗಂಟೆವರೆಗೆ ಯಾವುದೇ ರೀತಿಯ ವಿದ್ಯುತ್ ಅಭಾವ ಆಗದಂತೆ ನೋಡಿಕೊಳ್ಳುವುದು ಒಳ್ಳೆಯದು ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮುತುವರ್ಜಿಯಿಂದ ಚಂದನ ವಾಹಿನಿಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪರೀಕ್ಷಾ ವಾಣಿ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಆದರೆ ಗ್ರಾಮಿಣ ಭಾಗದ ಅದರಲ್ಲೂ ತೋಟದ ವಸತಿ ನಿಲಯದಲ್ಲಿ ವಾಸವಾಗಿರುವ ಮಕ್ಕಳು ಈ ಕಾರ್ಯಕ್ರಮದಿಂದ ವಂಚಿತರಾಗಿದ್ದಾರೆ. ಅಥಣಿ, ರಾಯಬಾಗ, ಚಿಕ್ಕೋಡಿ ಹೀಗೆ ಹಲವಾರು ತಾಲೂಕಿನ ಜನರು ತೋಟದಲ್ಲಿ ವಾಸವಿರುವುದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನ್ಯಾಯದ ಆಗದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿರು ಆಗ್ರಹಿಸಿದ್ದಾರೆ.