ಬೆಳಗಾವಿ: ಬೆಳಗಾವಿ ಸಂಪರ್ಕಿಸುವ ಮತ್ತು ಗಡಿ ಭಾಗ ಪ್ರವೇಶಿಸುವ ಎಲ್ಲಡೆಯೂ ಅಗತ್ಯ ಭದ್ರತೆ ಕೈಗೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ಶಿವಸೇನೆ ಕಾರ್ಯಕರ್ತರು ರಾಜ್ಯ ಪ್ರವೇಶಿಸದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಮಹಾನಗರ ಡಿಸಿಪಿ ವಿಕ್ರಮ ಅಮಟೆ ಮಾಹಿತಿ ನೀಡಿದರು.
ಇದನ್ನೂ ಓದಿ...ಬೆಳಗಾವಿ ಪಾಲಿಕೆ ಮುಂದಿನ ಕನ್ನಡ ಧ್ವಜಕ್ಕೆ ಪೊಲೀಸ್ ಸರ್ಪಗಾವಲು
ಗಡಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಶಿನ್ನೋಳ್ಳಿ ಚೆಕ್ಫೋಸ್ಟ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸಿಪಿಯೊಬ್ಬರಿಗೆ ಈ ಭದ್ರತೆ ಜವಾಬ್ದಾರಿ ವಹಿಸಲಾಗಿದ್ದು, ಮಹಾರಾಷ್ಟ್ರದಿಂದ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ ಎಂದರು.
ಶಿವಸೇನೆ ಕಾರ್ಯಕರ್ತರು ಬೆಳಗಾವಿ ಪೊಲೀಸರನ್ನು ನೂಕಿ, ಉದ್ಧಟತನ ಪ್ರದರ್ಶಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಮಹಾನಗರಪಾಲಿಕೆ ಎದುರು ಕನ್ನಡಪರ ಹೋರಾಟಗಾರರು ಕನ್ನಡ ಧ್ವಜಸ್ತಂಭ ಸ್ಥಾಪಿಸಿ ಬಾವುಟ ಹಾರಿಸಿರುವುದನ್ನು ಖಂಡಿಸಿ, ನೆರೆಯ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು ಭಗವಾಧ್ವಜಗಳೊಂದಿಗೆ ರಾಜ್ಯದ ಗಡಿ ಪ್ರವೇಶಿಸಲು ಇಂದು ಯತ್ನಿಸಿದ್ದಾರೆ.