ಚಿಕ್ಕೋಡಿ: ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕರ ಮೇಲೆ ಅಥಣಿ ಪೊಲೀಸರು ಮನಬಂದಂತೆ ಲಾಠಿ ಬೀಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಎರಡು ವರ್ಷಗಳಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಅತಿವೃಷ್ಟಿ, ಪ್ರವಾಹ, ಕೊರೊನಾದಂತಹ ಸಂಕಷ್ಟಗಳಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಆದರೆ, ಇದೀಗ ಕಟಾವಿಗೆ ಬಂದ ಕಬ್ಬನ್ನು ಕಾರ್ಖಾನೆಗೆ ಕಳುಹಿಸುವುದಕ್ಕೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಚಿಕ್ಕೋಡಿ ಉಪವಿಭಾಗದ ಪೊಲೀಸರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ರಸ್ತೆ ಪಾಲಾದ ಕಬ್ಬು :
ಕೊರೊನಾ ಸಂಕಷ್ಟದ ಸಮಯದಲ್ಲಿ ಲಕ್ಷಾಂತರ ರೂ. ಸಾಲ ಮಾಡಿ, ವರ್ಷಾನುಗಟ್ಟಲೇ ಬೆವರು ಸುರಿಸಿ ರೈತರು ಕಬ್ಬಿನ ಬೆಳೆ ಬೆಳೆದಿದ್ದಾರೆ. ಆದ್ರೆ ರೈತರ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಕಷ್ಟಪಟ್ಟು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸುತ್ತಿರುವ ಕಬ್ಬು ರಸ್ತೆ ಪಾಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಟ್ರ್ಯಾಕ್ಟರ್ನಲ್ಲಿ ಕಬ್ಬನ್ನು ತೆಗೆದುಕೊಂಡು ಹೋಗುವಾಗ ಬೇರೆ ವಾಹನಗಳಿಗೆ ಕಿರಿಕಿರಿ ಉಂಟುಮಾಡುತ್ತದೆ ಎಂಬ ಕಾರಣಕ್ಕೆ ಟ್ರ್ಯಾಕ್ಟರ್ ಹೊರಗೆ ಬಂದಿರುವ ಕಬ್ಬನ್ನು ಕಟ್ ಮಾಡಿ ರಸ್ತೆಗೆ ಹಾಕಲಾಗುತ್ತಿದೆ. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಅನ್ನದಾತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಟ್ರ್ಯಾಕ್ಟರ್ ಚಾಲಕರಿಗೆ ಲಾಠಿ ಏಟು:
ಕಬ್ಬನ್ನು ತುಂಬಿಕೊಂಡು ಹೋಗುವ ಟ್ರ್ಯಾಕ್ಟರ್ ಚಾಲಕರಿಗೆ ಅಥಣಿ ಮತ್ತು ಚಿಕ್ಕೋಡಿ ಉಪವಿಭಾಗದ ಪೊಲೀಸರು ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜೊತೆಗೆ ಮನಬಂದಂತೆ ಟ್ರ್ಯಾಕ್ಟರ್ ಚಾಲಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎನ್ನಲಾಗಿದೆ. ವಿನಾಕಾರಣ ಮನಬಂದಂತೆ ದಂಡ ಹಾಕುತ್ತಿದ್ದಾರೆ, ಹೀಗಾಗಿ ರೈತರ ಜಮೀನುಗಳಿಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇತ್ತ ಕಾರ್ಖಾನೆ ಮಾಲೀಕರು ಸಹ ರೈತರ ಬಾಕಿ ಬಿಲ್ ಕೊಡದೆ ಸತಾಯಿಸುತ್ತಿದ್ದು, ಟ್ರ್ಯಾಕ್ಟರ್ ಚಾಲಕರ ಮೇಲೆ ಲಾಠಿ ಬೀಸುವ ಬದಲು ಬುದ್ಧಿ ಹೇಳಿ ಮತ್ತೊಮ್ಮೆ ತಪ್ಪು ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಬೇಕು ಎಂಬುದು ರೈತರ ಆಗ್ರಹ.