ಬೆಳಗಾವಿ: ಕೋವಿಡ್ ತಡೆಗೆ ಸರ್ಕಾರ ಹೇರಿದ್ದ ಲಾಕ್‌ಡೌನ್ ಎಫೆಕ್ಟ್ನಿಂದ ಸಣ್ಣ, ಮಧ್ಯಮ, ಮತ್ತು ಅತಿ ಸಣ್ಣ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿವೆ. ಆದ್ರೆ, ನಗರದ ನೇಕಾರಿಕೆ ಕುಟುಂಬವೊಂದು ಲಾಕ್‌ಡೌನ್ ಅನ್ನೇ ಸದ್ಭಳಕೆ ಮಾಡಿಕೊಂಡು ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದೆ.
ತಾಲೂಕಿನ ವಡಗಾವಿ ನಗರದ ನಿವಾಸಿ ಲೋಹಿತ್ ಮೋರಕರ್ ಎಂಬುವರು ಜರಿ ಉದ್ಯಮ (ಸೀರೆಗೆ ಬೇಕಾಗುವ ಕಚ್ಚಾ ವಸ್ತು ತಯಾರಿಸುವ ಘಟಕ)ದಿಂದ ಸ್ವಾವಲಂಬನೆ ಬದುಕು ಕಟ್ಟಿಕೊಂಡಿದ್ದಾರೆ. ಲೋಹಿತ್ ಕಳೆದ ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ 30 ಲಕ್ಷಕ್ಕೂ ಹೆಚ್ಚಿನ ಸಾಲ ಪಡೆದಿದ್ದರು. ಸೀರೆ ತಯಾರಿಸಲು ಬೇಕಾಗುವ ಜರಿ (ದಾರದ) ಘಟಕವನ್ನು ಸ್ಥಾಪಿಸಿದರು.
ಸಂಕಷ್ಟಕ್ಕೆ ಸಿಲುಕಿದ್ರೂ ಧೈರ್ಯಗೆಡಲಿಲ್ಲ:
ಇನ್ನೇನು ಉದ್ಯಮ ಪ್ರಾರಂಭಿಸಿ ವರ್ಷ ಕಳೆಯುವರಷ್ಟರಲ್ಲಿಯೇ ದೇಶಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತದೆ. ಕೊರೊನಾ ತಡೆಗೆ ಎರಡು ಬಾರಿ ರಾಜ್ಯದಲ್ಲಿ ಲಾಕ್‌ಡೌನ್ ಹೇರಲಾಗುತ್ತದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಲೋಹಿತ್ ಮೋರಕರ್ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನದೇ ಜರಿ ಘಟಕವನ್ನು ಕಾರ್ಮಿಕರಿಲ್ಲದೇ ಸ್ವತಃ ತಾವೇ ನಿರ್ವಹಿಸಲು ಮುಂದಾಗುತ್ತಾರೆ. ಮೊದಲು ಕಾರ್ಖಾನೆಯಲ್ಲಿ ಕಡಿಮೆ ಕೆಲಸಕ್ಕೆ ಇದ್ದ ಕಾರ್ಮಿಕರಿಂದ ಕಲಿತ ಕೆಲಸವನ್ನು ತನ್ನ ಕುಟುಂಬಸ್ಥರಿಗೆ ಕಲಿಸಿಕೊಡುತ್ತಾ, ತಮ್ಮ ಉದ್ಯಮವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಸದ್ಯ ಒಳ್ಳೆಯ ಲಾಭ ಪಡೆಯುತ್ತಿದ್ದಾರೆ.
ಸ್ವಾವಲಂಬಿ ಬದುಕಿಗೆ ದಾರಿ:
ರಾಜ್ಯದಲ್ಲಿ ನಿರಂತರ ಮಳೆಗೆ 2019ರಲ್ಲಿ ನೆರೆ ಹಾವಳಿ ಸಂಭವಿಸಿತ್ತು. ಇದಾದ ಬಳಿಕ ವಕ್ಕರಿಸಿಕೊಂಡ ಕೊರೊನಾ ಹತೋಟಿಗೆ ತರಲು ರಾಜ್ಯ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಫ್ಯಾಕ್ಟರಿ ಸ್ಥಗಿತಗೊಳ್ಳುತ್ತದೆ. ಪರಿಣಾಮ, ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಇರುವ ಬಿಹಾರಿ ಕಾರ್ಮಿಕರು ತವರಿಗೆ ಹಿಂದಿರುಗುತ್ತಾರೆ. ಲಾಕ್‌ಡೌನ್ ಸಡಿಲಿಕೆ ಆದ ಬಳಿಕ ಬಿಹಾರಿ ಕಾರ್ಮಿಕರು ರಾಜ್ಯಕ್ಕೆ ಆಗಮಿಸಿ ಇನ್ನೇನು ಉದ್ಯಮ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಮತ್ತೊಂದು ಬಾರಿಗೆ ಲಾಕ್‌ಡೌನ್ ಜಾರಿ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಹೋಗಿರುವ ಕಾರ್ಮಿಕರು ಈವರೆಗೂ ಬಂದಿಲ್ಲ. ಹೀಗಾಗಿ ಮೊದಲು ಅವರ ಮೇಲೆಯೇ ಅವಲಂಬಿತವಾಗಿದ್ದ ಲೋಹಿತ್ ಕುಟುಂಬ ಅವರು ಮಾಡುವ ಎಲ್ಲ ಕೆಲಸಗಳನ್ನು ಕಲಿತುಕೊಂಡು ಸದ್ಯ ಜರಿ ಉದ್ಯಮದಲ್ಲಿ ಸೈ ಎನಿಸಿಕೊಂಡಿದೆ.
ಸೀರೆಗೆ ಕಚ್ಚಾವಸ್ತುಗಳನ್ನು ಒದಗಿಸುವ ಫ್ಯಾಕ್ಟರಿ:
ನೇಕಾರರು ತಯಾರಿಸುವ ಸೀರೆಗಳ ಬಾರ್ಡರ್ಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಈ ಜರಿ ಘಟಕ ತಯಾರಿಸುತ್ತದೆ. ಜರಿ ಉದ್ಯಮಕ್ಕೆ ಬೇಕಾಗುವ ಕಚ್ಚಾವಸ್ತುಗಳನ್ನು ಮಹಾರಾಷ್ಟ್ರ ಮತ್ತು ಗುಜರಾತ್ನ ಸೂರತ್ನಿಂದ ಆಮದು ಮಾಡಿಕೊಳ್ಳಲಾಗ್ತಿದೆ. ಆದ್ರೆ, ಸದ್ಯ ಅಲ್ಲಿಂದ ಬರುವ ಕಚ್ಚಾವಸ್ತುಗಳ ಆಮದು ಕೊರತೆ ಆಗುತ್ತಿದೆ. ಹೀಗಾಗಿ ಕಚ್ಚಾವಸ್ತುಗಳ ದರ ಕೂಡ 20ರಿಂದ 30ರಷ್ಟು ಹೆಚ್ಚಾಗಿದೆ. ಹೀಗಾಗಿ ಕಾರ್ಮಿಕರಿಗೆ ಕೊಡುವ ಹಣ ಕಚ್ಚಾವಸ್ತುಗಳಿಗೆ ಹೋಗುತ್ತಿದೆ.
ಕುಟುಂಬಸ್ಥರು ಕೂಡಿಕೊಂಡು ಉದ್ಯಮ:
ಸದ್ಯ ಬಿಹಾರಿ ಕಾರ್ಮಿಕರು ಇಲ್ಲದೆಯೂ ನಾನು, ನನ್ನ ಪತ್ನಿ, ತಾಯಿ, ಹಾಗೂ ಸಹೋದರರ ಸಹಾಯದಿಂದ ಜರಿ ಘಟಕವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ. ಬಿಹಾರಿ ಕಾರ್ಮಿಕರು ಹೋದ್ಮೇಲೆ ಸ್ವಲ್ಪಮಟ್ಟಿಗೆ ತೊಂದರೆ ಆಗಿತ್ತು. ಸದ್ಯ ಯಾವುದೇ ತೊಂದರೆ ಆಗದಂತೆ ಮನೆಯವರು ಕೂಡಿಕೊಂಡು ಉದ್ಯಮವನ್ನು ನಡೆಸಿಕೊಂಡು ಹೋಗುವ ಮೂಲಕ ಸ್ವಾವಲಂಬನೆ ಬದುಕನ್ನು ಕಟ್ಟಿಕೊಂಡಿದ್ದೇವೆ.
ಇದನ್ನೂ ಓದಿ: ಚಿತ್ರೀಕರಣಕ್ಕೆ ಅನುಮತಿ ಪಡೆಯುವ ನಿಯಮಗಳಲ್ಲಿ ಬದಲಾವಣೆ ತರುತ್ತೇವೆ: ಸಿಎಂ ಬೊಮ್ಮಾಯಿ
ಐದು ಜನರಿಗೆ ತಿಂಗಳಿಗೆ 50 ಸಾವಿರ ಹಣವನ್ನು ವೇತನವಾಗಿ ಕೊಡಲಾಗುತ್ತಿತ್ತು. ಸದ್ಯ ಅವರಿಗೆ ಕೊಡುವ ಹಣ ಕೂಡ ಉಳಿತಾಯವಾಗುತ್ತಿದೆ. ನಾವು ಮಾಡುವ ಕೆಲಸದಲ್ಲೂ ಯಾವುದೇ ರೀತಿಯ ವ್ಯತ್ಯಾಸ ಆಗುತ್ತಿಲ್ಲ. ಅವರು ಯಾವ ರೀತಿ ಕೆಲಸ ಮಾಡುತ್ತಿದ್ದರೋ ಅದರಂತೆ ನಾವು ಕೂಡ ನಿರ್ವಹಿಸುತ್ತಿದ್ದೇವೆ. ಹೀಗಾಗಿ ನಮ್ಮ ರಾಜ್ಯದ ಕಾರ್ಮಿಕರು ಈ ಕೆಲಸವನ್ನು ಕಲಿಯಬೇಕು ಎಂಬುದು ಲೋಹಿತ್ ಅವರ ಮಾತು.
ಸ್ಥಳೀಯ ಸಂಪನ್ಮೂಲಗಳ ಬಳಕೆಗೆ ಆದ್ಯತೆ :
ಆರ್ಥಿಕ ಕುಸಿತದಿಂದ ಈಗಾಗಲೇ ನಷ್ಟ ಅನುಭವಿಸುತ್ತಿರುವ ಉದ್ಯಮಗಳ ಮೇಲೆ ಕೊರೊನಾ ಪರಿಸ್ಥಿತಿ ಬರೆ ಎಳೆದಂತಾದೆ. ಈಗ ತಾನೆ ಬೆಳವಣಿಗೆ ಕಾಣುತ್ತಿರುವ ಕೆಲ ಉದ್ಯಮಗಳು ಮತ್ತೆ ಸುಧಾರಿಸಿಕೊಳ್ಳಲು ಬಹುಕಾಲ ಬೇಕಾಗಬಹುದು. ಲಾಕ್ ಡೌನ್ ತೆರವಿನ ನಂತರ ಕಾರ್ಮಿಕರ ಕೊರತೆಯಿಂದಾಗಿ ಹಲವು ಉದ್ಯಮಗಳು ಕಾರ್ಯಾರಂಭ ಮಾಡಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರು ತಮ್ಮ ತಮ್ಮ ಸ್ವಂತ ಸ್ಥಳಗಳಿಗೆ ತೆರಳಿದ್ದಾರೆ. ಹೀಗಾಗಿ ಸಾಂಕ್ರಾಮಿಕ ರೋಗದಿಂದ ಉಂಟಾದ ಬಿಕ್ಕಟ್ಟನ್ನು ಎದುರಿಸಲು ಉದ್ಯಮಗಳು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ತುರ್ತು ಅಗತ್ಯವಿದೆ.