ಚಿಕ್ಕೋಡಿ: ಮುಂಬೈನಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ಮೊದಲ ವಿಶ್ವ ಮಲ್ಲಕಂಬ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಪುರುಷರ ತಂಡದಲ್ಲಿ ಕರ್ನಾಟಕದ ಏಕೈಕ ಕ್ರೀಡಾಪಟು ಭಾಗವಹಿಸಿದ್ದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದ ವೀರಭದ್ರ ಮುಧೋಳ ಎಂಬ ಉತ್ತರ ಕರ್ನಾಟಕದ ಪ್ರತಿಭೆ, ಈ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಶ್ವ ಮಲ್ಲಕಂಬ ಸ್ಪರ್ಧೆಯಲ್ಲಿ ಭಾರತ ತಂಡದ 6 ಸದಸ್ಯರ ಪೈಕಿ ಒಬ್ಬರಾಗಿದ್ದ ವೀರಭದ್ರ ಅವರು, ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಪ್ರಾಚೀನ ಕ್ರೀಡೆ ಮಲ್ಲಕಂಬ, ಕ್ರೀಡಾಪಟುಗಳಿಗೆ ದೈಹಿಕ ಸಾಮರ್ಥ್ಯದ ಜೊತೆಯಲ್ಲಿ ಮಾನಸಿಕ ಸ್ಥೈರ್ಯವನ್ನು ನೀಡುತ್ತದೆ. ಸದ್ಯ ಮೂಡಬಿದರೆಯ ಆಳ್ವಾಶ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವೀರಭದ್ರ, ಮಲ್ಲಕಂಬ ಜೊತೆಗೆ ತಮ್ಮ ಒಡನಾಟ ಇಟ್ಟುಕೊಂಡಿದ್ದಾರೆ.
ಚಿಕ್ಕ ವಯಸ್ಸಿನಿಂದ ಮಲ್ಲಕಂಬ ಅಭ್ಯಾಸ...
ಬೆಂಡವಾಡ ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿ ಓದುವಾಗಲೇ ವೀರಭದ್ರ ಯೋಗಾಭ್ಯಾಸದತ್ತ ಹೆಚ್ಚಿನ ಗಮನ ಹರಿಸಿದ್ದರು. 6ನೇ ತರಗತಿಗೆ ಜಿಲ್ಲೆಯ ಮೂಡಲಗಿ ತಾಲೂಕಿನ ಚೈತನ್ಯ ಶಾಲೆಗೆ ಸೇರಿದ ವೀರಭದ್ರ, ಓದುವಾಗಲೇ ರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಬಳಿಕ ಹೈಸ್ಕೂಲ್ ವ್ಯಾಸಾಂಗವನ್ನು ಮೈಸೂರಿನ ಜೆಎಸ್ಎಸ್ ಶಾಲೆಯಲ್ಲಿ ಮುಗಿಸಿ, ಪಿಯುಸಿಗೆ ಮೂಡಬಿದರೆಯ ಆಳ್ವಾಸ್ ಕಾಲೇಜಿಗೆ ಸೇರಿದರು.
ಆಳ್ವಾಸ್ನಲ್ಲಿ ಮಲ್ಲಕಂಬ ಅಭ್ಯಾಸ ಮುಂದುವರಿಸಲು ಮತ್ತಷ್ಟು ಪ್ರೋತ್ಸಾಹ ಸಿಕ್ಕು ಅಲ್ಲಿಂದ ಇವರು ಮಹಾರಾಷ್ಟ್ರದ ಮುಂಬೈನಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ಮೊದಲ ವಿಶ್ವ ಮಲ್ಲಕಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ.
ದಿನಕ್ಕೆ ಐದು ಗಂಟೆ ಮಲ್ಲಕಂಬ ಅಭ್ಯಾಸ...
ವೀರಭದ್ರ, ಪ್ರತಿದಿನ ಐದು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಾರೆ. ಬೆಳಗ್ಗೆ ಎರಡೂವರೆ ಗಂಟೆ ಹಾಗೂ ಸಂಜೆ ಎರಡೂವರೆ ಗಂಟೆಗಳ ಕಾಲ ಮಲ್ಲಕಂಬ ಅಭ್ಯಾಸ ಮಾಡುತ್ತಾರೆ.
ಏಳು ಬಾರಿ ರಾಷ್ಟ್ರೀಯ ಪದಕ ವಿಜೇತ...
6ನೇ ತರಗತಿಯಲ್ಲಿದ್ದಾಗಲೇ ರಾಷ್ಟ್ರೀಯ ಪದಕ ಗೆದ್ದಿದ್ದ ವೀರಭದ್ರ, ಸತತ ಐದು ವರ್ಷ ರಾಜ್ಯ ಹಾಗೂ ರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.