ಬೆಳಗಾವಿ: ಬಿಜೆಪಿ ಬಂಡಾಯ ಅಭ್ಯರ್ಥಿ ಅಶೋಕ್ ಪೂಜಾರಿ ಜಾರಕಿಹೊಳಿ ಸಹೋದರರ ಜತೆಗೆ ಕಾಂಪ್ರಮೈಸ್ ಆಗಿಲ್ಲ ಎಂದು ತಲೆಯ ಮೇಲೆ ಎರಡು ಕೊಡ ನೀರು ಹಾಕಿಕೊಂಡು ದೇವರ ಮೇಲೆ ಪ್ರಮಾಣ ಮಾಡಿ ಕಣ್ಣೀರು ಹಾಕಿದ್ದಾರೆ.
ಅಶೋಕ್ ಪೂಜಾರಿ ಕಾಂಪ್ರಮೈಸ್ ರಾಜಕಾರಣಿ ಎಂದು ಅನೇಕರು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ನಗರದಲ್ಲಿ ಬೆಂಬಲಿಗರ ಸಭೆ ಕರೆದಿದ್ದ ಅವರು, ಚುನಾವಣೆ ಸ್ಪರ್ಧೆ ಸಂಬಂಧ ಬೆಂಬಲಿಗರ ಅಭಿಪ್ರಾಯ ಪಡೆದರು. ಈ ವೇಳೆ ಕೆಲವರು ಸಂಶಯ ವ್ಯಕ್ತಪಡಿಸಿದ್ದಕ್ಕೆ ಬೆಂಬಲಿಗರನ್ನು ನೇರವಾಗಿ ಸಂಗಮೇಶ್ವರ ದೇವಸ್ಥಾನಕ್ಕೆ ಕರೆದೊಯ್ದು, ದೇವರ ಮೇಲೆ ಪ್ರಮಾಣ ಮಾಡಿ ನಾನು ಜಾರಕಿಹೊಳಿ ಸಹೋದರರ ಜತೆಗೆ ಕಾಂಪ್ರಮೈಸ್ ಆಗಿಲ್ಲ. ಅವರಿಂದ ಹಣವನ್ನು ಪಡೆದು ಸೈಲೆಂಟ್ ಆಗಿಲ್ಲ. ನನ್ನ ಮನೆ ದೇವರು ಕೂಡಲ ಸಂಗಮೇಶ್ವರ ಮೇಲಾಣೆ ಎಂದರು.
ದೇವರನ್ನು ಮುಟ್ಟಬೇಡಿ ಎಂದು ಬೆಂಬಲಿಗರು ಎಷ್ಟೇ ಕೇಳಿಕೊಂಡರೂ ಮನೆ ದೇವರ ಮೇಲೆ ಪ್ರಮಾಣ ಮಾಡಿದ ಅಶೋಕ ಪೂಜಾರಿ, ತಮ್ಮ ಬಗ್ಗೆ ಸಂಶಯ ಪಡಬೇಡಿ ಎಂದು ಕಣ್ಣೀರು ಹಾಕಿದ್ದಾರೆ. ನಾನು ಯಾರಿಗೂ ಸೊಪ್ಪು ಹಾಕಿ ರಾಜಕಾರಣ ಮಾಡಿಲ್ಲ. ನಾನೊಬ್ಬ ಬಡ ಜಂಗಮ ಇದ್ದೇನೆ. ದಯವಿಟ್ಟು ಅಪಪ್ರಚಾರ ಮಾಡ್ಬೇಡಿ. ದುಡ್ಡು ಪಡೆದು ಕಾಂಪ್ರಮೈಸ್ ಆಗಿದ್ದೇನೆ ಎಂದು ಅಪಪ್ರಚಾರ ಮಾಡಬೇಡಿ. ಅಶೋಕ ಪೂಜಾರಿ ಕಾಂಪ್ರಮೈಸ್ ರಾಜಕಾರಣಿ ಅಲ್ಲ. ಜೀವನದಲ್ಲಿ ನನ್ನನ್ನು ಯಾರೂ ಬುಕ್ ಮಾಡಲು ಸಾಧ್ಯವಿಲ್ಲ. ಚುನಾವಣೆಗೆ ನೀಡಿದ ಎಲೆಕ್ಷನ್ ಫಂಡ್ ಖರ್ಚು ಮಾಡಿದ್ದೇನೆ. ವೈಯಕ್ತಿಕವಾಗಿ ನಾನು ಹಣ ಬಳಸಿಲ್ಲ. ನನ್ನ ಮನೆದೇವರು ಕೂಡಲ ಸಂಗಮನಾಥನ ಮೇಲೆ ಪ್ರಮಾಣ ಮಾಡ್ತೇನೆ ಎಂದು ದೇವರನ್ನ ಮುಟ್ಟಿ ಕಣ್ಣೀರು ಹಾಕಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಶೋಕ್ ಪೂಜಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈಗ ರಮೇಶ್ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಹಾಗಾಗಿ ಅಶೋಕ್ ಪೂಜಾರಿ ಈಗ ಅತಂತ್ರರಾಗಿದ್ದಾರೆ.