ಬೆಳಗಾವಿ: ಮಂತ್ರಿಮಂಡಳ ವಿಸ್ತರಣೆ ಆದಾಗ ಸಹಜವಾದ ನೋವು, ಭಾವನೆಗಳನ್ನ ನಮ್ಮ ಶಾಸಕರು ವ್ಯಕ್ತಪಡಿಸಿದ್ದಾರೆ. ಅವರೆಲ್ಲರನ್ನೂ ಕರೆದು ಮಾತನಾಡಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಹಜವಾಗಿ ಸಂಪುಟ ವಿಸ್ತರಣೆ ಆದಾಗ ಶಾಸಕರು ನೋವುಗಳನ್ನ ಹೇಳಿಕೊಂಡಿದ್ದಾರೆ. ಅವರನ್ನು ಕರೆದು ಮಾತನಾಡಿಸಲಾಗುವುದು.
ಇಂದಿನ ಸಭೆಯಲ್ಲಿ ಅಮಿತ್ ಶಾ ಅವರು ಕಾರ್ಯಕರ್ತರಿಗೆ ಉತ್ತರವನ್ನು ಚೆನ್ನಾಗಿ ಕೊಟ್ಟಿದ್ದಾರೆ. ಪಾರ್ಟಿ ಕಾರ್ಯಕ್ರಮಗಳು, ಮುಂಬರುವ ಜಿಪಂ, ತಾಪಂ ಚುನಾವಣೆ ಉಪಚುನಾವಣೆಗಳಲ್ಲಿ ಹೇಗೆ ಗೆಲುವು ಸಾಧಿಸಬೇಕೆಂಬ ಸಲಹೆ ನೀಡಿದ್ದಾರೆ ಎಂದರು.
ಬೆಳಗಾವಿ ಲೋಕಸಭೆ ಉಪಚುನಾವಣೆ ಪಾರ್ಟಿ ಸಂಘಟಿಸಬೇಕು, ಹೇಗೆ ಗೆಲ್ಲಿಸಿಕೊಂಡು ಬರಬೇಕು ಎಂಬುವುದರ ಕುರಿತು ಚರ್ಚೆ ಮಾಡಲಾಗಿದೆ. ಅನೌಪಚಾರಿಕವಾಗಿ ನಮ್ಮೊಂದಿಗೆ ಶಾ ಚರ್ಚೆ ನಡೆಸಿದ್ದಾರೆ. ಸಿಎಂ ಬದಲಾವಣೆ ಅಪ್ರಸ್ತುತ, ಅವರನ್ನು ಬದಲಾವಣೆ ಮಾಡೋದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರೇ ಸಾರ್ವಜನಿಕ ಭಾಷಣದಲ್ಲಿಯೇ ಹೇಳಿದ್ದಾರೆ.
ಮುಂಬರುವ ಎರಡೂವರೆ ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ನಾಯಕತ್ವ ಚರ್ಚೆ ಮಾಧ್ಯಮದಲ್ಲಿ ಮಾತ್ರ, ನಮ್ಮಲ್ಲಿ ಇಲ್ಲ ಎಂದರು.