ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದ ಕೊಲೆಯೊಂದರ ಪ್ರಕರಣದ ದೂರನ್ನು ಆಧರಿಸಿ ಒಂದೇ ದಿನದಲ್ಲಿ ಮೂವರು ಆರೋಪಿಗಳನ್ನು ಮೂಡಲಗಿ ಪೋಲಿಸರು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೂಡಲಗಿ ತಾಲೂಕಿನ ಗುರ್ಲಾಪೂರ ಗ್ರಾಮದ ಮಲ್ಲಪ್ಪ ರಂಗಾಪೂರ (30), ಈಶ್ವರ ನಿಂಗಪ್ಪ ಹತ್ತರಕಿ (52) ಹಾಗೂ ಮನ್ಯಾಳ ಗ್ರಾಮದ ಲಕ್ಷ್ಮಿ ಪಾಟೀಲ (38) ಆರೋಪಿಗಳು. ಮುನ್ಯಾಳ ಗ್ರಾಮದ ಕೊಲೆಯಾದ ಆರೋಪಿ ಮಹಾದೇವ ಪಾಟೀಲ (40) ಅವರ ಮಗ ಮೂಡಲಗಿ ಪೋಲಿಸ್ ಠಾಣೆಯಲ್ಲಿ ಕೊಲೆಯ ಬಗ್ಗೆ ಪ್ರಕರಣ ದಾಖಲಿಸಿದ್ದ. ಪ್ರಕರಣ ದಾಖಲಾದ 12 ಗಂಟೆಯಲ್ಲಿ ಕೊಲೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಉಪಯೋಗಿಸಿದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಡೆದಿದ್ದಿಷ್ಟು
ಮಹಾದೇವ ಪಾಟೀಲ ಮೃತ ವ್ಯಕ್ತಿ ಪ್ರತಿದಿನ ಸಾರಾಯಿ ಕುಡಿದು ತನ್ನ ಪತ್ನಿ ಲಕ್ಷ್ಮೀ ಸಂಗಡ ತಂಟೆ ತಕರಾರು ಮಾಡುವುದು, ಹೊಡಿಬಡಿ ಮಾಡುವುದು ಮಾಡುತಿದ್ದನು. ಇದರಿಂದ ಬೇಸತ್ತ ಲಕ್ಷ್ಮಿ ತನ್ನ ತಮ್ಮ ಗುರ್ಲಾಪುರದ ಮಲ್ಲಪ್ಪನಿಗೆ ಜ.8 ರಂದು ಫೋನ್ ಮೂಲಕ ತಿಳಿಸಿದಾಗ ಮಲ್ಲಪ್ಪನು ಮುನ್ಯಾಳಕ್ಕೆ ಬಂದು ಮಹಾದೇವನಿಗೆ ಕೊಲೆ ಮಾಡುವ ಉದ್ದೇಶದಿಂದ ರಾತ್ರಿ 8 ಗಂಟೆಯ ಸುಮಾರಿಗೆ ತನ್ನ ಮೋಟಾರ ಸೈಕಲ್ನಲ್ಲಿ ಕರೆದುಕೊಂಡು ಹೋಗಿ ಮಹಾದೇವನನ್ನು ಕೊಲೆ ಮಾಡಿದ್ದಾನೆ ಎಂದು ಮಹಾದೇವನ ಮಗ ಮಲ್ಲೇಶ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.
ಇದನ್ನೂ ಓದಿ: ಕಲಾಸಿಪಾಳ್ಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಟೈರ್ ಕಳ್ಳರ ಬಂಧನ
ದೂರಿನನ್ವಯ 12 ಗಂಟೆಯಲ್ಲಿ ಪೋಲಿಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.