ಬೆಳಗಾವಿ: ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ 5 ಬಾರಿ ಶಾಸಕರಾಗಿ, ಒಮ್ಮೆ ಎಂಎಲ್‍ಸಿಯಾಗಿ, ಎರಡು ಬಾರಿ ಸಚಿವ, ಒಮ್ಮೆ ಸಂಸದರಾಗಿದ್ದರು. ಹೀಗಾಗಿ ವಾಯುವ್ಯ ಕ್ಷೇತ್ರ ವ್ಯಾಪ್ತಿ ಹೊಂದಿರುವ ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಹುಕ್ಕೇರಿ ರಾಜಕೀಯ ಹಿಡಿತ ಹೊಂದಿದ್ದಾರೆ. ಇನ್ನೂ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಕೂಡ ಎರಡು ಬಾರಿ ಎಂಎಲ್‍ಸಿ ಆಗಿದ್ದಾರೆ. ಆರ್ಎಸ್ಎಸ್ ಬೆಂಬಲವೂ ಇವರಿಗಿದ್ದು, ಕಾರ್ಯಕರ್ತರು ಈಗಾಗಲೇ ಅಖಾಡಕ್ಕಿಳಿದಿದ್ದಾರೆ.
ಶಹಾಪುರಗೆ ವಿರೋಧಿ ಅಲೆ: ವಾಯವ್ಯ ಶಿಕ್ಷಕ ಕ್ಷೇತ್ರವ್ಯಾಪ್ತಿಯಲ್ಲಿ 36 ವಿಧಾನಸಭೆ ಕ್ಷೇತ್ರಗಳಿವೆ. ಮೂರು ಜಿಲ್ಲೆಗಳಲ್ಲಿ ಶಹಾಪುರಗೆ ವಿರೋಧಿ ಅಲೆಯಿದೆ. ಚುನಾವಣೆ ಸಮಯದಲ್ಲಿ ಮಾತ್ರ ಶಿಕ್ಷಕರ ಬಳಿ ಬರುವ ಇವರು, ನಂತರ ಶಿಕ್ಷಕರ ಸಮಸ್ಯೆಗಳನ್ನು ಆಲಿಸುವುದಿಲ್ಲವೆಂಬ ಆರೋಪಗಳಿವೆ. ಕೋವಿಡ್‍ನಿಂದ ಮೃತಪಟ್ಟ ಶಿಕ್ಷಕ ಕುಟುಂಬಗಳಿಗೆ ತಮ್ಮದೇ ಸರ್ಕಾರ ಇದ್ದರೂ ಪರಿಹಾರ ಕೊಡಿಸಲು ಶಹಾಪುರಗೆ ಸಾಧ್ಯವಾಗಿಲ್ಲ. ಮೃತ ಶಿಕ್ಷಕರ ಕುಟುಂಬಗಳಿಗೆ ಸಾಂತ್ವನ ಹೇಳಿಲ್ಲ. ಹೀಗಾಗಿ ಇಡೀ ಶಿಕ್ಷಕ ವಲಯವೇ ಇದೀಗ ಶಹಾಪುರ ವಿರುದ್ಧ ತಿರುಗಿ ಬಿದ್ದಿದೆ ಎನ್ನಲಾಗಿದೆ.
ಶಹಾಪುರಗೆ ವಿರೋಧಿ ಅಲೆ ಇರುವುದು ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬೆಳಗಾವಿಗೆ ಆಗಮಿಸಿ ಪ್ರಮುಖರ ಸಭೆ ನಡೆಸಿದರು. ಶಹಾಪುರ ಗೆಲುವಿಗೆ ತಂತ್ರ ರೂಪಿಸಿದರು. ಇನ್ನು ಪರಿಷತ್ ಸದಸ್ಯ ಪುಟ್ಟಣ್ಣ ಕೂಡ ಬೆಳಗಾವಿಯಲ್ಲೇ ಠಿಕಾಣಿ ಹೂಡಿದ್ದು, ಶಿಕ್ಷಕ ಸಂಘದ ಪದಾಧಿಕಾರಿಗಳ ಜೊತೆಗೆ ನಿರಂತರ ಸಭೆ ನಡೆಸುತ್ತಿದ್ದಾರೆ.
ಹುಕ್ಕೇರಿಗೆ ಬಂಡಾಯದ ಬಿಸಿ: ಅರುಣ್ ಶಹಾಪುರ ಗೆಲುವಿನ ಓಟಕ್ಕೆ ಕಡಿವಾಣ ಹಾಕಲೆಂದೇ ಕಾಂಗ್ರೆಸ್ ಹೈಕಮಾಂಡ್ ರಾಜಕೀಯ ಅನುಭವಿ ಪ್ರಕಾಶ್ ಹುಕ್ಕೇರಿಗೆ ಟಿಕೆಟ್ ಘೋಷಣೆ ಮಾಡಿದೆ. ಹುಕ್ಕೇರಿ ಮೂಲತಃ ಶಿಕ್ಷಕರಲ್ಲ. ಶಿಕ್ಷಕ ಪದವಿಯನ್ನೂ ಪಡೆದಿಲ್ಲ. ಆದರೆ ಮೂರು ಜಿಲ್ಲೆಗಳಲ್ಲಿ ಹಿಡಿತ ಹೊಂದಿದ್ದಾರೆ. ಜೊತೆಗೆ ಪ್ರಭಾವಿ ಪಂಚಮಸಾಲಿ ಸಮುದಾಯದ ನಾಯಕರಾಗಿಯೂ ಇವರು ಗುರುತಿಸಿಕೊಂಡಿದ್ದಾರೆ. ಆದರೆ ಹುಕ್ಕೇರಿಗೆ ಇದೀಗ ಬಂಡಾಯದ ಬಿಸಿ ತಟ್ಟಿದೆ.
ಇದನ್ನೂ ಓದಿ: ಕೊಡಗು: ಲಾರಿಯಿಂದ ರಾಸಾಯನಿಕ ದ್ರವ ಸೋರಿಕೆ, ವಿದ್ಯಾರ್ಥಿಗಳು ಅಸ್ವಸ್ಥ
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಎನ್.ಬಿ.ಬನ್ನೂರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸಿದ್ದಾರೆ. ಎನ್.ಬಿ.ಬನ್ನೂರ ಜೊತೆಗೆ ಮಾತುಕತೆ ನಡೆಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದರು. ಆದರೆ ಈವರೆಗೆ ಅದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಬೆಳಗಾವಿಗೆ ಬರುತ್ತಿದ್ದು, ಎನ್.ಬಿ.ಬನ್ನೂರ ಮನವೊಲಿಸುವ ಸಾಧ್ಯತೆ ಇದೆ. ಎನ್.ಬಿ. ಬನ್ನೂರ ಅಖಾಡದಿಂದ ಹಿಂದೆ ಸರಿದರೆ ಮಾತ್ರ ಕಾಂಗ್ರೆಸ್ಸಿಗೆ ಲಾಭವಾಗಲಿದೆ. ಇಲ್ಲವಾದರೆ ಕಾಂಗ್ರೆಸ್ ಮತಗಳು ವಿಭಜನೆ ಆಗಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ.