ಗೋಕಾಕ್: ನೆರೆ ಪೀಡಿತರಿಗಾಗಿ ನಗರದ ಕಡಬಗಟ್ಟಿ ಬಳಿ ಅರಣ್ಯ ಇಲಾಖೆಯ ಭೂಮಿಯಲ್ಲಿ ನಿರ್ಮಿಸಿದ ಶೆಡ್‍ಗಳ ಕೇಂದ್ರಗಳಿಗೆ ಮಾಜಿ ಸಚಿವ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿ ಸಂತ್ರಸ್ತರ ಕುಂದುಕೊರತೆಗಳನ್ನು ಆಲಿಸಿದರು.
ಈ ವೇಳೆ ಶೆಡ್ ನಿವಾಸಿಗಳು, ಇಲ್ಲಿ ನಿರ್ಮಿಸಲಾದ ಸ್ನಾನ ಗೃಹಗಳಿಗೆ ಬಾಗಿಲುಗಳೇ ಇಲ್ಲ, ಇದರಿಂದ ಮಹಿಳೆಯರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ವಿದ್ಯುತ್ ಸೌಲಭ್ಯ ಸರಿಯಾಗಿಲ್ಲ, ಕುಡಿಯಲು ನೀರು ಸಿಗುತ್ತಿಲ್ಲ ಎಂದು ಶಾಸಕರ ಬಳಿ ತಮ್ಮ ನೋವು ತೋಡಿಕೊಂಡರು.
ನಿವಾಸಿಗಳ ತೊಂದರೆ ಮನಗಂಡ ಸತೀಶ್ ಜಾರಕಿಹೊಳಿ, ತಮ್ಮ ಸ್ವಂತ ಖರ್ಚಿನಲ್ಲಿಯೆ ಶೆಡ್‌ಗಳಿಗೆ ಬಾಗಿಲು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಹೇಳಿದರು. ಇದೇ ವೇಳೆ, ನಿವಾಸಿಗಳಿಗೆ ದಿನಬಳಕೆಯ ವಸ್ತುಗಳ ಕಿಟ್ಗಳನ್ನು ವಿತರಿಸಿದರು.
ನೆರೆ ಪೀಡಿತ ಶೆಡ್ ನಿವಾಸಿಗಳ ಜೀವನ ನರಕ ಎಂದು ಈಟಿವಿ ಭಾರತ, ಅ.18 ರಂದು ವರದಿ ಮಾಡಿತ್ತು.