ಬೆಳಗಾವಿ: ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ಅಶೋಕ್ ಪೂಜಾರಿ ಅವರ ಬಂಡಾಯ ತಾರಕಕ್ಕೇರಿದೆ. ಪೂಜಾರಿ ಬಂಡಾಯ ಶಮನ ಮಾಡುವುದೇ ಬಿಜೆಪಿಗೆ ದೊಡ್ಡ ತಲೆನೋವಾಗಿ ಮಾರ್ಪಟ್ಟಿದೆ. ಅಂಬಿಗೇರ ಗಲ್ಲಿಯಲ್ಲಿರುವ ಅಶೋಕ್ ಪೂಜಾರಿ ನಿವಾಸಕ್ಕೆ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಭೇಟಿ ನೀಡಿದರು. ಪೂಜಾರಿ ಜತೆ ಸಭೆ ನಡೆಸಿದ ನಡಹಳ್ಳಿ ಬಿಜೆಪಿಗೆ ಬೆಂಬಲಿಸುವಂತೆ ಕೋರಿದ್ದಾರೆ.
ಆದರೆ, ಇಂದು ಸಂಜೆ 6ರವರೆಗೆ ಸಮಯ ಕೇಳಿರುವ ಅಶೋಕ್ ಪೂಜಾರಿ ನಂತರ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಜೆಡಿಎಸ್ನಲ್ಲಿದ್ದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ಇದೀಗ ರಮೇಶ್ ಜಾರಕಿಹೊಳಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿದ್ದು, ಅಶೋಕ್ ಬಂಡಾಯವೆದ್ದಿದ್ದಾರೆ. ಚುನಾವಣೆ ಕಣದಿಂದ ಹಿಂದೆ ಸರಿಯದಂತೆ ಪೂಜಾರಿ ಬೆಂಬಲಿಗರು ಮಧ್ಯಾಹ್ನದಿಂದ ಗೋಕಾಕ್ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿಗೆ ಅಶೋಕ್ ಪೂಜಾರಿ ಬಿಸಿ ತುಪ್ಪವಾಗಿ ಮಾರ್ಪಟ್ಟಿದ್ದಾರೆ.