ಬೆಳಗಾವಿ: ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ಕೊರೊನಾ ಮೃತರ ಲೆಕ್ಕವನ್ನು ರಾಜ್ಯದ ಜನರಿಗೆ ತಪ್ಪಾಗಿ ನೀಡುತ್ತಿದ್ದಾರೆ. ಇದೇ ಲೆಕ್ಕವನ್ನು ಚಿಕ್ಕಬಳ್ಳಾಪುರ ಜನರ ಎದುರಿಗೆ ಹೇಳಿದರೆ ಅಲ್ಲಿನ ಜನ ಸಚಿವರನ್ನು ಪೊರಕೆಯಿಂದ ಹೊಡೆಯುತ್ತಾರೆ ಎಂದು ಕೆಪಿಸಿಸಿ ವಕ್ತಾರೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ 25 ಆಕ್ಸಿಜನ್ ಕಾನ್ಸಂಟ್ರೇಟರ್: ಸಚಿವ ಡಾ. ಕೆ. ಸುಧಾಕರ್
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತಾನಾಡಿದ ಅವರು, ಚಿಕ್ಕಬಳ್ಳಾಪುರಕ್ಕೆ ಹೋಗಿ ಡಾ. ಕೆ.ಸುಧಾಕರ್ ಕೋವಿಡ್ ಸಾವಿನ ಲೆಕ್ಕ ಹೇಳಲಿ. ಚಿಕ್ಕಬಳ್ಳಾಪುರ ಜನ ಅವರನ್ನು ಪೊರಕೆ ತೆಗೆದುಕೊಂಡು ಹೊಡಿತಾರೆ. ಆರೋಗ್ಯ ಸಚಿವ ಡಾ. ಸುಧಾಕರ್ ಸಾವಿನ ಲೆಕ್ಕವನ್ನು ತಪ್ಪಾಗಿ ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ರಾಜ್ಯದಲ್ಲಿ ಒಬ್ಬರು ಆರೋಗ್ಯ ಸಚಿವರಿಲ್ಲ. ಬೆಡ್‌ಗೆ, ವ್ಯಾಕ್ಸಿನೇಷನ್, ಸ್ಮಶಾನಕ್ಕೆ, ಆಕ್ಸಿಜನ್‌ಗೆ ಒಬ್ಬೊಬ್ಬರು ಸಚಿವರನ್ನು ನೇಮಕ ಮಾಡಲಾಗಿದೆ. ಆಕ್ಸಿಜನ್, ವ್ಯಾಕ್ಸಿನ್, ಟೆಸ್ಟಿಂಗ್ ವಿಚಾರದಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕ್ತಿದೆ. ಡಬಲ್ ಇಂಜಿನ್ ಸರ್ಕಾರ ಪರಿಸ್ಥಿತಿ ಎಲ್ಲಿಗೆ ಬಂದಿದೆ. ಜನ ನಿಮಗೆ ಕಲ್ಲು ಒಗೆಯುವ ಕಾಲ ಬಹಳ ಹತ್ತಿರದಲ್ಲಿದೆ. ವ್ಯಾಕ್ಸಿನೇಷನ್‌ಗೆ ಕಾಂಗ್ರೆಸ್ ಪಕ್ಷದಿಂದ 100 ಕೋಟಿ ರೂ. ದುಡ್ಡು ಕೊಡ್ತೀವಿ ಅಂತ ಪತ್ರ ಬರೆದು ಎಂಟು ದಿನ ಆಯ್ತು. ಈವರೆಗೂ ಅದರ ಬಗ್ಗೆ ಉತ್ತರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮಾಮಿ ಗಂಗಾ ಅಂತಾ ಹೇಳಿದ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಸ್ವಚ್ಛ ಭಾರತ್ ಅಂತ ಹೇಳಿ ದೇಶವನ್ನು ಬಹಳ ಚೆನ್ನಾಗಿ ಸ್ವಚ್ಛ ಮಾಡ್ತಿದ್ದಾರೆ. ಮನೆಯಲ್ಲಿ ದೀಪ ಬೆಳಗಿಸುತ್ತಿದ್ದ ಬಡವರು ಇಂದು ಬೂದಿಯಾಗಿ ಹೋಗುತ್ತಿದ್ದಾರೆ. ಗಂಗೆಯನ್ನು ಸ್ವಚ್ಛ ಮಾಡ್ತೀವಿ ಅಂದಿದ್ರಿ. ಇಂದು ಗಂಗಾ ನದಿಯಲ್ಲಿ ಎಷ್ಟು ಹೆಣಗಳು ತೇಲ್ತಿವೆ ಇಡೀ ವಿಶ್ವ ನೋಡುತ್ತಿದೆ. ಇಡೀ ವಿಶ್ವವೇ ಭಾರತ ದೇಶಕ್ಕೆ ಛೀಮಾರಿ ಹಾಕ್ತಿದೆ.
ತೌಕ್ತೆ ಚಂಡಮಾರುತದಿಂದ ದೇಶದಲ್ಲಿ ಸಾಕಷ್ಟು ಹಾನಿಯಾಗಿದೆ. ಪ್ರಧಾನಿ ಕೇವಲ ಗುಜರಾತ್ನಲ್ಲಿ ವೈಮಾನಿಕ ಸಮೀಕ್ಷೆ ಮಾಡಿ ಸಾವಿರ ಕೋಟಿ ಘೋಷಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಕಾಣಿಸೋದಿಲ್ವಾ? ನಿಮ್ದೇ ಸರ್ಕಾರ ಇರುವ ನಮ್ಮ ರಾಜ್ಯಕ್ಕೆ ಏಕೆ ಪದೇ ಪದೆ ಅನ್ಯಾಯ ಮಾಡ್ತಿದ್ದೀರಿ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.