ಬೆಳಗಾವಿ : ಥೂ.. ಥೂ.. ಎನ್ನಲು ನಾನೇನು ಮಾಡಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.
ಬೈಲಹೊಂಗಲ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸೋದೇ ನನ್ನ ಗುರಿ ಅಂತೀರಿ. ನಾನು ನಮ್ಮ ಪಕ್ಷದಲ್ಲಿ ಬೆಳೆಯಬಾರದಾ? ನೀವು ನಿಮ್ಮ ಪಕ್ಷದಲ್ಲಿ ಬೆಳೆಯಿರಿ, ನಾನೇನು ಅಡ್ಡಿ ಮಾಡಿದ್ದೇನಾ? ಎಂದು ಪ್ರಶ್ನಿಸಿದರು.
ಲಿಂಗಾಯತ ಸಮುದಾಯದಲ್ಲಿ ಹುಟ್ಟಿರುವ ಹೆಣ್ಣು ಮಗಳು ನಾನು. ಥೂ.. ಥೂ..ಎನ್ನುವ ಮೂಲಕ ಇಡೀ ಸ್ತ್ರೀಕುಲಕ್ಕೆ ರಮೇಶ್ ಜಾರಕಿಹೊಳಿ ಅಪಮಾನ ಮಾಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಗೂ ಅನ್ಯಾಯ ಮಾಡುತ್ತಿದ್ದಾರೆ:
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಲ್ಲಿದ್ದು ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣರಾದರು. ಈಗ ಬಿಜೆಪಿಗೂ ಅನ್ಯಾಯ ಮಾಡುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.
'ನಾವು ಸತ್ತಾಗ ಹೊರಗಿನವರು ಯಾರೂ ಬರಲ್ಲ'
ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆದರೆ, ಮೂರನೇ ಅಭ್ಯರ್ಥಿಯ ಅವಶ್ಯಕತೆ ಏನಿತ್ತು?. ಊರಿಗೆ ಒಂದೊಂದು ಗಾಡಿಯನ್ನು ಬಿಟ್ಟಿದ್ದಾರೆ. ಚುನಾವಣೆ ಮುಗಿದ ಮೇಲೆ ಆ ಗಾಡಿಗಳು ಇಲ್ಲೇ ಇರ್ತಾವಾ? ಎಲೆಕ್ಷನ್ ಮುಗಿದ ಮೇಲೆ ಅವರು ಪಂಚಾಯತ್‌ನಲ್ಲೇ ಕಸ ಗೂಡಿಸುತ್ತಾರಾ? ನಾವು ಸತ್ತಾಗ ಹೊರಗಿನವರು ಯಾರೂ ಬರಲ್ಲ. ನಾವು ನೀವು ಅಷ್ಟೇ.. ಬೆಳಗಾವಿ ಜಿಲ್ಲಾ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬಗ್ಗೆ ನೀವೇ ವಿಚಾರ ಮಾಡಿ ಎಂದರು.
'ಜಾರಕಿಹೊಳಿ ಕುಟುಂಬಕ್ಕೆ ಸತೀಶ್ ಜಾರಕಿಹೊಳಿ ಕಿರೀಟ ಪ್ರಾಯ'
ಸತೀಶ್ ಜಾರಕಿಹೊಳಿ ಮುಖಂಡತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಇವರು ಕೂಡ ಜಾರಕಿಹೊಳಿ ಕುಟುಂಬಕ್ಕೆ ಸೇರಿದವರು. ರಾಜಕೀಯದಲ್ಲಿ ಸತೀಶ್ ಅವರದ್ದು ಮಾಸ್ಟರ್ ಮೈಂಡ್. ಜಾರಕಿಹೊಳಿ ಕುಟುಂಬಕ್ಕೆ ಸತೀಶ್ ಜಾರಕಿಹೊಳಿ ಕಿರೀಟ ಪ್ರಾಯ ಇದ್ದಂತೆ ಎಂದು ಬಣ್ಣಿಸಿದರು.
ಇದನ್ನೂ ಓದಿ: ಸನಾತನ ಹಿಂದೂ ಧರ್ಮವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದೆ : ಶ್ರೀ ವಿಶ್ವಪ್ರಸನ್ನ ತೀರ್ಥರು
ನನ್ನ ಸಹೋದರ ಚನ್ನರಾಜ್ ಹಟ್ಟಿಹೊಳಿಗೆ ಮತ ಕೇಳಲು ಇಲ್ಲಿಗೆ ಬಂದಿದ್ದೇನೆ. ಮುಂದೆ ಮಂತ್ರಿ ಆಗ್ತಿನಿ, ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಆದರೆ ನಿಮ್ಮ ಸ್ವಾಭಿಮಾನ ಮಾರಿಕೊಳ್ಳಬೇಡಿ. ಕಾಂಗ್ರೆಸ್ ಪುಣ್ಯದ ಪಕ್ಷ. ಒಂದು ವೋಟ್ ನಮಗೆ ಕೊಡಿ, ನಮ್ಮ ಪಕ್ಷ ನಿಮ್ಮ ಸೇವೆ ಮಾಡುತ್ತದೆ ಎಂದರು.