ಚಿಕ್ಕೋಡಿ(ಬೆಳಗಾವಿ): ಮುಂದೆ ನನ್ನನ್ನೇ ಮುಖ್ಯಮಂತ್ರಿ ಮಾಡಲಿ ಎಂದು ಜೈಲಿಗೆ ಹೋಗುವಂತಹ ಕೆಟ್ಟ ಕುಟುಂಬದ ಪರವಾಗಿ ಕಾಂಗ್ರೆಸಿಗರು ಬ್ಯಾರಿಕೇಡ್ ಜಿಗಿಯುತ್ತಿದ್ದಾರೆ. ಆದರೆ ಪಾಪ ಸಿದ್ದರಾಮಯ್ಯ ಲುಂಗಿ ಸುತ್ತುತಾರೆ. ಅದಕ್ಕೆ ಅವರಿಗೆ ಬ್ಯಾರಿಕೇಡ್ ಜಿಗಿಯಲು ಬರೋದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಪ್ರಾಮಾಣಿಕವಾಗಿದ್ದರೆ ಇಡಿಯವರು ಯಾಕೆ ತನಿಖೆ ಮಾಡ್ತಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಆಸ್ತಿ ಮೌಲ್ಯ 5 ಸಾವಿರ ಕೋಟಿ ಇದೆ. ಆದರೆ ಅದನ್ನ ಕೇವಲ 50 ಕೋಟಿಗೆ ಖರೀದಿ ಮಾಡಿದ್ದಾರೆ. ಅದರ ಬಗ್ಗೆ ಸ್ಪಷ್ಟನೆ ನೀಡಬೇಕು. ಮೇಲ್ನೋಟಕ್ಕೆ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ನೀವು ಪ್ರಾಮಾಣಿಕವಾಗಿದ್ರೆ ಇಡಿ ತನಿಖೆ ಎದುರಿಸಿ. ಇಡಿಗೆ ಹೋದವರೆಲ್ಲರಿಗೂ ಶಿಕ್ಷೆ ಆಗಿಲ್ಲ. ಇಡಿ ತನಿಖೆ ಸುಪ್ರೀಂ ಕೋರ್ಟ್ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಇದನ್ನು ಮೋದಿ ಮಾಡುತ್ತಿಲ್ಲ. ಸೋನಿಯಾ ಗಾಂಧಿ ಭ್ರಷ್ಟಾಚಾರ ಮಾಡಿದ್ದು ಸತ್ಯ. ಸುಪ್ರೀಂ ಕೋರ್ಟ್ ಆದೇಶವನ್ನೇ ಉಲ್ಲಂಘಿಸಿ ಅದಕ್ಕೆ ಅವಮಾನ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಭ್ರಷ್ಟಾಚಾರ ಮಾಡಿಲ್ಲವಾದರೆ ಅಂತಿಮವಾಗಿ ಕೋರ್ಟ್ ಮತ್ತು ಇಡಿ ಮುಂದೆ ಸಾಬೀತುಪಡಿಸಲಿ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ರಾಜಕೀಯ ನಿವೃತ್ತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೋದಿಯವರು ಪ್ರಧಾನಿ ಆದಾಗಿಂದ 75ನೇ ವರ್ಷಕ್ಕೆ ಚುನಾವಣೆ ನಿವೃತ್ತಿಯ ಪರಿಪಾಠ ಪ್ರಾರಂಭವಾಗಿದೆ. ಪಾಪ ಅವರು ಅದಕ್ಕೆ ಚುನಾವಣಾ ರಾಜಕೀಯದಿಂದ ನಿವೃತ್ತಿರಾಗಿದ್ದಾರೆ. ಆದರೆ, ಉಳಿದ ರಾಜಕಾರಣದಲ್ಲಿ ಅವರು ಮುಂದುವರೆಯುವ ಸಾಧ್ಯತೆ ಇದೆ ಎಂದು ಶಾಸಕ ಯತ್ನಾಳ್ ಹೇಳಿದರು.
ಬಿಎಸ್ವೈ ಅವರು ಪುತ್ರ ವಿಜೇಂದ್ರಗೆ ಮೈಸೂರು ಭಾಗದ ಕ್ಷೇತ್ರದಲ್ಲಿ ಚುನಾವಣೆ ಎದುರಿಸುವ ಒತ್ತಡ ವಿಚಾರಕ್ಕೆ ಪ್ರತಿಕ್ರಿಯಿಸುತ್ತ ಮೈಸೂರು, ಬೀದರ್ ಹಾಗೂ ಬಸವ ಕಲ್ಯಾಣ ಭಾಗದಿಂದ ಒತ್ತಡ ಇದೆ ಎಂದು ಎಲ್ಲರೂ ಹೇಳಿಕೊಳ್ಳುತ್ತಾರೆ. ಆದರೆ ಶಿಕಾರಿಪುರದಲ್ಲಿ ತಂದೆ ಇಚ್ಛೆಯಂತೆ ಮಗ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯೋತ್ಸವ ವಿಚಾರಕ್ಕೆ, ಇವೆಲ್ಲ ನಿವೃತ್ತಿ ಉತ್ಸವಗಳು. ಸಿದ್ದರಾಮಯ್ಯಮವರಿಗೆ ಇನ್ನು 75 ವರ್ಷ ಆಗಿಲ್ಲ. ಒಂದು ವರ್ಷ ಮೊದಲೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲ್ಲ. ಅದಕ್ಕೆ 2 ಇನ್ 1 ಉತ್ಸವ ಹಾಗೂ ನಿವೃತ್ತಿ ಎರಡನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಮೂರ್ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ವಿಚಾರ ಕುರಿತು ಮಾತನಾಡಿ, ರಮೇಶ್ ಕುಮಾರ್ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಅವರು ಬಹಳ ವರ್ಷದ ನಂತರ ಸತ್ಯ ನುಡಿದಿದ್ದಾರೆ. 40 ವರ್ಷದ ರಾಜಕೀಯದಲ್ಲಿ ಇವತ್ತು ಸತ್ಯ ಹೇಳಿದ್ದಾರೆ. ಗಾಂಧಿ ಮನೆತನ, ಕಾಂಗ್ರೆಸ್ ಪಕ್ಷದ ಹೆಸರ ಮೇಲೆ ಮಾಡಿಕೊಂಡಿದ್ದಾರಲ್ಲ ಅದಕ್ಕೆ ಹೇಳಿದ್ದಾರೆ ಎಂದರು.
ಸಚಿವ ಸ್ಥಾನದ ಆಕಾಂಕ್ಷಿಗಳ ಹೆಚ್ಚಳ ವಿಚಾರಕ್ಕೆ, ಬೊಮ್ಮಾಯಿ ಅವರಿಗೆ ಯಾರೂ ಸಚಿವ ಸ್ಥಾನ ಕೇಳುತ್ತಿಲ್ಲ. ಅವರೇ ಕ್ರಿಯೇಟ್ ಮಾಡುತ್ತಾರೆ. ನಾನು ದೆಹಲಿಗೆ ಹೋಗುತ್ತಿದ್ದೇನೆ. ವರಿಷ್ಠರೊಂದಿಗೆ ಮಾತನಾಡಿ ಸಂಪುಟ ರಚನೆ ಮಾಡುತ್ತೇನೆ ಎಂದು ಹೇಳುತ್ತಾರೆ. ಚುನಾವಣೆ ಸಮೀಪಿಸುತ್ತಿದೆ. ನಮಗೆ ಯಾವ ಮಂತ್ರಿಗಿರಿ ಬೇಡ. ಇದ್ದ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡಿ. 8 ತಿಂಗಳಿಗೆ ಸಚಿವರಾಗಿ ಮಾಡುವುದೇನು ಇಲ್ಲ. ನನ್ನ ಕ್ಷೇತ್ರದಲ್ಲಿ ನಾನು ಸಾವಿರ ಕೋಟಿಯ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದೇನೆ. ಮಂತ್ರಿಯಾದರೆ ಇಷ್ಟು ಅನುದಾನ ಬರಲ್ಲ. ನಿನಗೆ ಮಂತ್ರಿ ಮಾಡೇವಿ ಅಂತಾ ಹೇಳ್ತಾರೆ. ಮಂತ್ರಿ ಮಾಡಿರುವ ಉಪಕಾರಕ್ಕೆ ನಾವು ಸುಮ್ಮನಿರಬೇಕಾಗುತ್ತದೆ ಎಂದು ಯತ್ನಾಳ್ ಹೇಳಿದ್ರು.