ಬೆಳಗಾವಿ : ನಮ್ಮದು ಈಗಾಗಲೇ ಹಿಂದೂ ರಾಷ್ಟ್ರವಿದೆ. ಹೀಗಾಗಿ, ಆರ್ಎಸ್ಎಸ್ನ ಹಿಂದೂ ರಾಷ್ಟ್ರವನ್ನು ನಾವು ಒಪ್ಪಲ್ಲ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೊದಲು ನಮ್ಮ ದೇಶದ ಮೇಲೆ ಬ್ರಿಟಿಷರು ಸೇರಿ ಹಲವರು ದಾಳಿ ಮಾಡಿದ್ದರು. ಆದರೂ ದೇಶಕ್ಕೆ ಏನೂ ಆಗಲಿಲ್ಲ. ಹಿಂದೂ ಧರ್ಮವನ್ನು ಯಾರಿಂದಲೂ ಟಚ್ ಮಾಡಲು ಆಗಲ್ಲ. ಅಂದು ಹಿಂದೂ ಧರ್ಮ ಇತ್ತು. ಇಂದು ಸಹ ಹಾಗೆಯೇ ಇದೆ. ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದರು.
ವೋಟ್ ಬ್ಯಾಂಕ್ : ಬಿಜೆಪಿ ಕೇವಲ ವೋಟ್ ಬ್ಯಾಂಕ್ಗಾಗಿ ಧರ್ಮ, ಜಾತಿ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ. ನಮ್ಮದು ಹಿಂದೂ ರಾಷ್ಟ್ರ. ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ ಮಾಡಿದ್ದಾರೆ. ಈಗ್ಯಾವ ಹೊಸ ಹಿಂದೂ ರಾಷ್ಟ್ರ ಮಾಡಲು ಇವರು ಹೊರಟ್ಟಿದ್ದಾರೆ. ಆರ್ಎಸ್ಎಸ್ನ ಹಿಂದೂ ರಾಷ್ಟ್ರವನ್ನು ನಾವು ಒಪ್ಪಲ್ಲ. ಹಿಂದೂ ಧರ್ಮದ ಬಗ್ಗೆ ಮೊದಲು ಆರ್‌ಎಸ್‌ಎಸ್ ತಿಳಿದುಕೊಳ್ಳಬೇಕು. ಹಿಂದೂ ಧರ್ಮಕ್ಕೆ ಎಲ್ಲರೂ ಒಳಪಡುತ್ತಾರೆ. ಹಿಂದೂ ಧರ್ಮದ ಸಂಸ್ಕೃತಿ ಬಹಳ ದೊಡ್ಡದಿದೆ ಎಂದರು.
ಆರಗ ಜ್ಞಾನೇಂದ್ರರು ಆರ್‌ಎಸ್‌ಎಸ್ ಏಜೆಂಟ್ : ಗೃಹ ಸಚಿವ ಆರಗ ಜ್ಞಾನೇಂದ್ರ ಆರ್‌ಎಸ್‌ಎಸ್ ಎಜೆಂಟ್ರಂತೆ ವರ್ತಿಸುತ್ತಿದ್ದಾರೆ. ಬೆಂಗಳೂರು ದಲಿತ ಯುವಕ ಚಂದ್ರು ಸಾವು ಪ್ರಕರಣದ ಕುರಿತು ಆರಗ ಜ್ಞಾನೇಂದ್ರ ಅವರು ನೀಡಿರುವ ಹೇಳಿಕೆ ಖಂಡನೀಯ. ಘಟನೆಯ ಬಗ್ಗೆ ಬೆಳಗ್ಗೆ ಬೆಂಗಳೂರು ಕಮಿಷನರ್ ಟ್ವೀಟ್ ಮಾಡಿದ್ದರು. ಹೀಗಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಶಾಂತಿ ಕದಡಲು ಗೃಹ ಸಚಿವರು ಯತ್ನಿಸುತ್ತಿದ್ದಾರೆ. ಹಾಗಾಗಿ, ಅವರ ವಿರುದ್ಧ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿಸಿದರು.
ಧರ್ಮವನ್ನಾಧರಿಸಿ ಚುನಾವಣಾ ತಂತ್ರ : ರಾಜ್ಯದಲ್ಲಿ ಶಾಂತಿ ನೆಲೆಸಲು ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಎಂದು ಸಿಎಂ ಬಸವರಾಜ ಬೊಮ್ಮಾಯವರನ್ನು ಆಗ್ರಹಿಸುವೆ. ಮೂರು ವರ್ಷದಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಮುಂದಿನ ವರ್ಷ ಚುನಾವಣೆ ಇದೆ. ಧರ್ಮಗಳನ್ನು ಆಧರಿಸಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಂಡ್ಯ: ಮುಸ್ಕಾನ್ ಕುಟುಂಬದ ವಿರುದ್ಧ ಎಸ್ಪಿಗೆ ದೂರು ನೀಡಿದ ಅನಂತಕುಮಾರ್ ಹೆಗಡೆ ಅಭಿಮಾನಿಗಳು
ಹಿಂದಿ ಹೇರಿಕೆಗೆ ಆಕ್ರೋಶ : ಕೇಂದ್ರ ಗೃಹ ಸಚಿವರಿಂದ ಹಿಂದಿ ಭಾಷೆ ಹೇರಿಕೆ ವಿಚಾರಕ್ಕೆ ಶಾಸಕಿ ನಿಂಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು. ವಿವಿಧತೆಯಲ್ಲಿ ಏಕತೆ ಇದೆ. ಹಿಂದೂ ಸಂಸ್ಕೃತಿಯೇ ವಿವಿಧತೆಯಲ್ಲಿ ಏಕತೆ ಹೊಂದಿದೆ. ಆದ್ರೆ, ದೇಶದಲ್ಲಿ ಹಿಂದಿ ಹೇರಿಕೆಯನ್ನು ನಾವು ಖಂಡಿಸುತ್ತೇವೆ. ದೇಶದಲ್ಲಿರುವ ಶೇ. 60 ರಿಂದ 70ರಷ್ಟು ಜನರು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡುತ್ತಾರೆ. ಹೀಗಾಗಿ, ಒಂದೇ ಭಾಷೆ ಹೇರಿಕೆ ಮಾಡುವುದು ಖಂಡನೀಯ ಎಂದರು.