ಬೆಳಗಾವಿ: ಸರ್ಕಾರದ ಕಾರ್ಯಕ್ರಮಗಳನ್ನು ವಿಮರ್ಶಿಸುವ ಅಧಿಕಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಿದೆ. ಆದ್ರೆ, ಅವರು ಯಾವ ಜಿಲ್ಲೆಗಳಿಗೂ ಪ್ರವಾಸ ಕೈಗೊಳ್ಳದೇ, ರಿವ್ಯೂ ಮಾಡದೇ ಮಾತನಾಡ್ತಾರೆ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಟೀಕಿಸಿದರು. ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲಾ ಜಿಲ್ಲೆಗೆ ಟೂರ್ ಮಾಡಿ ಸರ್ಕಾರಿ ಕಾರ್ಯಕ್ರಮಗಳ ಅಧ್ಯಯನ ಮಾಡಬೇಕು. ಅವರು ಜಿಲ್ಲಾಧಿಕಾರಿ ಜೊತೆ ಪರಿಶೀಲನೆ ಮಾಡಿದರೆ ಗೊತ್ತಾಗುತ್ತದೆ ಎಂದು ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ರಿವ್ಯೂನೂ ಮಾಡಲ್ಲ, ಸರ್ಕಾರಿ ಕಾರ್ಯಕ್ರಮ ತಿಳಿದುಕೊಳ್ಳೋಕೂ ಪ್ರಯತ್ನ ಮಾಡೋದಿಲ್ಲ. ಬೆಳಗಾವಿಗೆ ಬಂದಾಗ ಒಂದು ಮಾತನಾಡ್ತಾರೆ. ಮೈಸೂರಿಗೆ ಹೋದಾಗ ಮತ್ತೊಂದು ಮಾತನಾಡ್ತಾರೆ ಎಂದರು.
ಸಿಎಂ ಬೊಮ್ಮಾಯಿ ಅವರು ಒಳ್ಳೆಯ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಎಲ್ಲಾ ಜನಸಾಮಾನ್ಯರು ಮೆಚ್ಚುವ ಜನಪರ ಕಾರ್ಯಕ್ರಮಗಳು ಬಜೆಟ್‌ನಲ್ಲಿವೆ. ಬೊಮ್ಮಾಯಿ ಅವರು ಜನಸಾಮಾನ್ಯರಿಗೆ ಬೇಕಾದ ಯೋಜನೆಗಳನ್ನು ಜಾರಿ ಮಾಡ್ತಿದ್ದಾರೆ. ಎಲ್ಲಾ ಸಚಿವರು, ಜಿಲ್ಲಾಧಿಕಾರಿಗಳ ಸಭೆ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಒಗಳ ಸಭೆ ಮಾಡಿದ್ದಾರೆ. ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಮಾಡ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಭ್ರಷ್ಟಾಚಾರದ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಎಸ್.ಟಿ. ಸೋಮಶೇಖರ್, ಸಿದ್ದರಾಮಯ್ಯ ಅವರು ಸುಮ್ಮನೇ ಉಡಾಫೆ ಮಾತನಾಡ್ತಾರೆ. ಅವರ ಸರ್ಕಾರದ ಅವಧಿಯಲ್ಲಿ ಹಗರಣಗಳು ಆಗಲಿಲ್ವಾ?. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸಿಗೆ, ದಿಂಬು ಹಗರಣ ಏನಾಯ್ತು?. ಯಾವುದೇ ಹಗರಣ ಆಗಿದ್ರೆ ಸರಿಯಾದ ಮಾಹಿತಿ ಕೊಟ್ಟು ಹೇಳಬೇಕು ಎಂದು ಹರಿಹಾಯ್ದರು.
ಓದಿ: ಬಿಜೆಪಿ ಸೇರಲು ಕಾಂಗ್ರೆಸ್ ನಾಯಕರ ದುಂಬಾಲು: ಸಚಿವ ಶ್ರೀರಾಮುಲು ಬಾಂಬ್