ಬೆಳಗಾವಿ: ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಸತ್ತು ಹೋಗಿರುವ ಕಾಂಗ್ರೆಸ್ ಶವಸಂಸ್ಕಾರದ ಬಗ್ಗೆ ಅಲ್ಲದೇ ಮತ್ಯಾವುದರ ಬಗ್ಗೆ ಮಾತನಾಡುತ್ತೆ? ಬೆಳಗಾವಿ ಮಹಾನಗರ ಪಾಲಿಕೆಯಲ್ಲೂ ಕಾಂಗ್ರೆಸ್ ಬರಲ್ಲ. ಇಲ್ಲೂ ಅದು ಸತ್ತು ಹೋಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಬಂದಿರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷ ಮುಂದೆ ಏನು ಮಾಡಲಿದೆ ಎಂಬ ಬಗ್ಗೆ ಹೇಳಿದ್ರೆ ಚೆನ್ನಾಗಿರುತ್ತಿತ್ತು. ಅದನ್ನ ಬಿಟ್ಟು ದಿ.ಸುರೇಶ್ ಅಂಗಡಿ ಅಂತ್ಯಸಂಸ್ಕಾರವನ್ನ ಬಿಜೆಪಿ ಹೀನಾಯವಾಗಿ ಮಾಡಿತು ಎಂದಿರುವುದನ್ನು ಕೇಳಿ ತುಂಬಾ ನೋವಾಗಿದೆ. ಡಿಕೆಶಿ ಶವಸಂಸ್ಕಾರದ ವಿಚಾರದಲ್ಲೂ ರಾಜಕಾರಣ ಮಾಡ್ತಾರಲ್ಲಾ ಅಂತಾ ಬೇಸರವಿದೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದೆ. ಕೇಂದ್ರ, ರಾಜ್ಯ ಸರ್ಕಾರ ಮಾಡಿದ ಕೆಲಸಗಳ ಮೇಲೆ ಜನರು ಬೆಂಬಲ ನೀಡುತ್ತಿದ್ದು, ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಮತ ಹಾಕಿದ್ರೆ ಬೆಳಗಾವಿ ಜನರಿಗೆ ಶೇ. 50ರಷ್ಟು ತೆರಿಗೆ ವಿನಾಯಿತಿ: ಡಿ.ಕೆ.ಶಿವಕುಮಾರ್
ಡಿಕೆಶಿ ಅವರಿಗೆ ಸ್ಮಾರ್ಟ್ ಸಿಟಿ ಬಗ್ಗೆ ಕಲ್ಪನೆನೇ ಇಲ್ಲ. ಸ್ಮಾರ್ಟ್ ಸಿಟಿ ಎಂಎಲ್‌ಎ ಗ್ರ್ಯಾಂಟ್ ಅಲ್ಲ. ಸಾಮಾನ್ಯ ಜನರಿಗೆ ಏನೂ ಬೇಕು ಅಂತಾ ಚರ್ಚೆಯಾಗಿ ಕಾಮಗಾರಿ ಆಗುತ್ತೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಮಾಮೂಲಿ. ತಿಹಾರ್ ಜೈಲಿನಲ್ಲಿದ್ದು ಬಂದವರಿಗೆ ಭ್ರಷ್ಟಾಚಾರ ಹೇಗೆ ಮಾಡಬೇಕು ಅಂತಾ ಗೊತ್ತಿರುತ್ತೆ ಎಂದು ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು.
ಉಚಿತ ಶವಸಂಸ್ಕಾರ ಮಾಡುವ ಬಿಜೆಪಿ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಯಾರು ಸತ್ತೇ ಇಲ್ಲ, ಶವಸಂಸ್ಕಾರ ಮಾಡೇ ಇಲ್ಲ. ಬಿಜೆಪಿ ಸರ್ಕಾರದಲ್ಲಿ ಸಾವು ಖಚಿತ ಅಂತಾ ಡಿಕೆಶಿ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತ ಮಾಡುವಾಗ ಜನರು ಚಿರಂಜೀವಿಗಳಾ? ಕಾಂಗ್ರೆಸ್ನ ಇಂತಹ ಹೇಳಿಕೆಯಿಂದಲೇ ಜನರು ಇವರನ್ನ ಸೋಲಿಸಿದ್ದಾರೆ. ಚುನಾವಣೆ ಪ್ರಚಾರಕ್ಕೆ ಹೋಗಿ ಅಂತಾ ಕಾಂಗ್ರೆಸ್ನಲ್ಲಿ ಯಾರು ಸೂಚನೆ ಕೊಡಬೇಕು. ಡಿಕೆಶಿ ಮಾತು ಯಾರು ಕೇಳಲ್ಲ. ಇಲ್ಲಿಗೆ ಸಿದ್ದರಾಮಯ್ಯ ಯಾಕೆ ಬರಲಿಲ್ಲ? ಸೋಲುತ್ತೇವೆ ಎಂದು ಬೆಳಗಾವಿಗೆ ಯಾವ ನಾಯಕರು ಬರ್ತಿಲ್ಲ ಎಂದರು.