ಬೆಳಗಾವಿ: ರೈತರಿಗೆ, ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಬೆಳಗಾವಿ ತಾಲೂಕಿನ ಧಾಮಣೆ ಗ್ರಾಮದಲ್ಲಿ ನಡೆದ 'ಕಂದಾಯ ದಾಖಲೆ ಮನೆ ಬಾಗಿಲಿಗೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆ ಅತ್ಯಂತ ಮಹತ್ವದ ಯೋಜನೆ ಯೋಜನೆ ಇದಾಗಿದ್ದು, ರೈತರಿಗೆ ಸಾರ್ವಜನಿಕರಿಗೆ ದಾಖಲೆಗಳನ್ನು ಪಡೆಯಲು ಯಾವುದೇ ರೀತಿಯ ತೊಂದರೆಯಾಗಬಾರದು. ಕಂದಾಯ ಇಲಾಖೆಯಿಂದಲೇ ರೈತರ ಮನೆ ಮನೆಗಳಿಗೆ ಪಹಣಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಕಂದಾಯ ದಾಖಲೆಗಳನ್ನು ತಲುಪಿಸಲಾಗುವುದು ಎಂದರು.
ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 6,91,673 ರೈತರ ಕುಟುಂಬಗಳಿಗೆ 11,87,264 ಅವರ ಜಮೀನಿನ ಪಹಣಿ ಪತ್ರಿಕೆಗಳನ್ನು ಹಾಗೂ 13,67,563 ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಹಾಗೂ 94,485 ಅಟ್ಲಾಸ್ಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ದಾಖೆಗಳನ್ನು ಕೊಡಲಾಗುವುದು ಎಂದು ಹೇಳಿದರು.
ದಾಖಲೆಗಳು ಮುದ್ರಣವಾಗದೇ ರೈತರಿಗೆ ದಾಖಲೆಗಳನ್ನು ತಲುಪಿಸಲು ಸಾಧ್ಯವಾಗದೇ ಇದ್ದಲ್ಲಿ, ಅಂತಹ ರೈತರಿಗೆ ಮಾರ್ಚ್ 21 ರಿಂದ ಮಾರ್ಚ 26 ರ ವರೆಗೆ ಒಂದು ವಾರ ನಾಡಕಚೇರಿಯಲ್ಲಿ ಉಚಿತವಾಗಿ ದಾಖಲೆಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಕಂದಾಯ ಇಲಾಖೆಯ ಮಹತ್ವದ ಯೋಜನೆ:
ಗ್ರಾಮೀಣ ಮನೆಗಳ ಬಾಗಿಲಿಗೆ ಪಹಣಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸೇರಿದಂತೆ ಅವಶ್ಯ ಕಂದಾಯ ದಾಖಲೆಗಳನ್ನು ತಲುಪಿಸುವ ಜನಪರ ಮಹತ್ವದ ಯೋಜನೆ ಇದಾಗಿದೆ ಎಂದು ಬೆಳಗಾವಿ ದಕ್ಷಿಣ ಭಾಗದ ಶಾಸಕ ಅಭಯ ಪಾಟೀಲ ತಿಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ: ಸಚಿವ ಗೋವಿಂದ ಕಾರಜೋಳ, ಶಾಸಕ ಅಭಯ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಧಾಮಣೆ ಗ್ರಾಮದ ಮನೆಗಳಿಗೆ ಭೇಟಿ ನೀಡಿ, ಪಹಣಿ, ಆದಾಯ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿ 'ಕಂದಾಯ ದಾಖಲೆ ಮನೆಬಾಗಿಲಿಗೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಓದಿ: ಎರಡು ಕಾರು-ಬೈಕ್ ನಡುವೆ ಅಪಘಾತ.. ಸಿದ್ಧಗಂಗಾ ಮಠದಿಂದ ಮರಳುತ್ತಿದ್ದ ದಂಪತಿ ದುರ್ಮರಣ