ಬೆಳಗಾವಿ: ಸರ್ಕಾರದ ಕೋವಿಡ್-19 ನಿಯಮಾವಳಿಯಂತೆ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಗದ್ದುಗೆಗೆ ಇಂದು ಬಿರುಸಿನಿಂದ ಮತದಾನ ನಡೆಯುತ್ತಿದ್ದು, 37 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಜಿಲ್ಲೆಯ ಕಿತ್ತೂರು ತಾಲೂಕಿನ ವ್ಯಾಪ್ತಿಗೆ ಒಳಪಟ್ಟಿರುವ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಐದು ವರ್ಷಗಳ ಅವಧಿಗೆ ನಡೆಯುತ್ತಿರುವ ಪ್ರಸ್ತಕ ಸಾಲಿನ ಚುನಾವಣೆಯಲ್ಲಿ ಎರಡು ಬಣಗಳ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ. ಮಲಪ್ರಭಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಣದಲ್ಲಿ ಉದ್ಯಮಿ ನಾಸೀರ ಬಾಗವಾನ್ ಹಾಗೂ ಮಾಜಿ ಕೇಂದ್ರ ಸಚಿವ ಬಾಬಾಗೌಡರ ಪುತ್ರ ಪ್ರಕಾಶಗೌಡ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಎರಡು ಪೆನಲ್ಗಳಲ್ಲಿ ರೈತರು ಮತ್ತು ಯುವ ಅಭ್ಯರ್ಥಿಗಳ ಕಣದಲ್ಲಿದ್ದು, ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಇದಾದ ನಂತರ ಎರಡು ಘಂಟೆಗಳ ಕಾಲ ಮತ ಏಣಿಕೆ ನಡೆಯಲಿದ್ದು, ವಿಜೇತ ಅಭ್ಯರ್ಥಿಗಳನ್ನು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಲಿದ್ದಾರೆ. ಆದರೆ, ರೈತರ ಕಬ್ಬಿನ ಬಾಕಿ ಬಿಲ್ ನೀಡದೇ ಚುನಾವಣೆ ಎದುರಿಸುತ್ತಿರುವುದರಿಂದ ರೈತರ ಆಕ್ರೋಶಕ್ಕೂ ಈ ಚುನಾವಣೆ ಕಾರಣವಾಗಿದೆ.
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಹಿನ್ನೋಟ: 90ರ ದಶಕದಲ್ಲಿ ಏಷ್ಯಾಖಂಡದಲ್ಲಿಯೇ ಅತ್ಯುತ್ತಮ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿದ್ದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ದಕ್ಷಿಣ ಭಾರತದಲ್ಲಿಯೇ ಉತ್ತಮ ಸಕ್ಕರೆ ಕಾರ್ಖಾನೆ ಎಂದು ಕೇಂದ್ರ ಸರ್ಕಾರದಿಂದ 'ಪಾರ್ಥ - ಸಾರ್ಥ' ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಅಷ್ಟೇ ಅಲ್ಲದೇ ಸರ್ಕಾರಗಳು ನಿಗದಿಮಾಡಿದ ದರಕ್ಕಿಂತಲೂ ಹೆಚ್ಚು ಬಿಲ್ ನೀಡುವ ಮೂಲಕ ರೈತರ ಪಾಲಿನ ಕಾಮಧೇನು ಎನಿಸಿಕೊಂಡಿತ್ತು. ಇದಾದ ನಂತರ ಕೆಲ ಆಡಳಿತ ಮಂಡಳಿಯವರು ಮಾಡಿಕೊಂಡ ಭ್ರಷ್ಟಾಚಾರದಿಂದಾಗಿ ಸಕ್ಕರೆ ಕಾರ್ಖಾನೆ ಸಾಲದ ಸುಳಿಗೆ ಸಿಲುಕಿತ್ತು. ಆದರೀಗ ಕಾರ್ಖಾನೆ ಸಾಲದ ಸುಳಿಗೆ ಸಿಲುಕುತ್ತಿದಂತೆ ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದಲೇ ರಾಜಕೀಯವಾಗಿ ಬೆಳೆದ ಸಾಕಷ್ಟು ರಾಜಕಾರಣಿಗಳೀಗ ಸಾಲಕ್ಕೆ ಸಿಲುಕುತ್ತಿದಂತೆ ತೆರೆಮರೆಗೆ ಸರಿದಿರುವುದು ರೈತರ ನಿರೀಕ್ಷೆಗಳಿಗೆ ತಣ್ಣೀರೆರಚಿದಂತಾಗಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.
ಮಲ್ಲಪ್ರಭಾ ಸಕ್ಕರೆ ಕಾರ್ಖಾನೆ ಸಾಲದ ಸುಳಿಗೆ ಸಿಲುಕಲು ಕಾರಣ?
ಖಾಸಗೀರಕಣದ ಹೆಸರಿನಲ್ಲಿ ಸ್ವತಃ ರೈತರಿಗೆ ಗೊತ್ತಿಲ್ಲದಂತೆ 1,400 ರೈತರ ಹೆಸರಿನಲ್ಲಿ ಸುಮಾರು 86 ಕೋಟಿ ರೂ. ಹಗರಣವೇ ಕಾರ್ಖಾನೆ ಸಾಲದ ಸುಳಿಗೆ ಸಿಲುಕಲು ಮುಖ್ಯ ಕಾರಣ ಎನ್ನಲಾಗಿದೆ. ಇಂತಹ ಅನೇಕ ಕಾರಣಗಳ ನಡುವೆಯೇ ಸಕ್ಕರೆ ಕಾರ್ಖಾನೆ ರೈತರಿಗೆ 96 ಕೋಟಿ ರೂ. ಬಾಕಿ ಬಿಲ್ ಪಾವತಿಸಬೇಕಿದೆ. ಇದಲ್ಲದೇ 2019-20ನೇ ಸಾಲಿನ 15.40 ಕೋಟಿ ರೂ. ಬಿಲ್ ಕೂಡ ಬಾಕಿ ಉಳಿದಿದೆ. 2017-18ನೇ ಸಾಲಿಗೆ ಸಂಬಂಧಿಸಿದ 7 ಕೋಟಿ ರೂ. ಡಿವಿಡೆಂಟ್ ಸೇರಿದಂತೆ ಸಕ್ಕರೆ ಕಾರ್ಖಾನೆಯ ನೌಕರರ ಏಳು ತಿಂಗಳ 2.40 ಕೋಟಿ ರೂ. ವೇತನವು ಪಾವತಿಯಾಗಿಲ್ಲ. ಕಬ್ಬು ಕಟಾವು ಮತ್ತು ಸಾಗಣೆ ಸಂಬಂಧಿಸಿದ 3 ಕೋಟಿ ರೂ ಬಾಕಿ ಇದ್ದು, ಎಲ್ಲಕ್ಕಿಂತ ಹೆಚ್ಚಾಗಿ ಬಿಲ್ ಬಾಕಿ ಕಾರಣದಿಂದ ಜಪ್ತಿ ಮಾಡಿದ್ದ 1.40 ಲಕ್ಷ ಚೀಲ ಸಕ್ಕರೆ ಮಾರಾಟದಿಂದ ಬಂದ ಹಣ ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ಶುಗರ್ ಕಾರ್ಖಾನೆಯವರು ರೈತರಿಗೆ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.