ಚಿಕ್ಕೋಡಿ: ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ ಬಿಡುಗಡೆಯಾದ ನೀರನ್ನು ಚಿಕ್ಕೋಡಿ ಭಾಗದ ರೈತರು ತಡೆಯದೆ ಮುಂದೆ ಬಿಟ್ಟರೆ ಕಾಗವಾಡ, ಅಥಣಿ, ರಾಯಭಾಗ ತಾಲೂಕುಗಳ ಜನತೆಗೆ ನೀರು ತಲುಪಲಿದೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ರಾಜಾಪುರ ಜಲಾಶಯದ 62 ಗೇಟ್ ಗಳ ಪೈಕಿ 14 ಗೇಟುಗಳು ತೆರೆದಿದ್ದು, ಸುಮಾರು 1200 ದಿಂದ 1500 ಕ್ಯೂಸೆಕ್ಸ್ ನೀರು ಬಿಡುಗಡೆಯಾಗುತ್ತಿದೆ. ಇದಕ್ಕೆ ರೈತರು ಯಾವುದೇ ಅಡ್ಡಿ ಮಾಡದಿದ್ದರೆ ಕಾಗವಾಡ, ಅಥಣಿ, ರಾಯಭಾಗ ತಾಲೂಕುಗಳ ಜನತೆಗೆ ನೀರು ತಲುಪಬಹುದು. ಆದ್ದರಿಂದ ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದ ರೈತರು ತಮ್ಮ ಹೊಲಗಳಿಗೆ ನೀರು ಹರಿಸಿಕೊಳ್ಳದಂತೆ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಈ ಬಗ್ಗೆ ಹೆಸ್ಕಾಮ್ ಅಧಿಕಾರಿಗಳು ರೈತರೊಂದಿಗೆ ಸಭೆ ನಡೆಸಿದ್ದು ರೈತರು ಸಹಕರಿಸಿದ್ದಾರೆ. ಕೃಷ್ಣೆಗೆ ಹರಿದಿರುವ ನೀರು ತಮ್ಮ ಗ್ರಾಮಗಳನ್ನು ತಲುಪುವ ಬಗ್ಗೆ ಅಥಣಿ ಭಾಗದ ಜನರು ಕಾತರದಿಂದ ಕಾಯುತ್ತಿದ್ದು, ಮೂರು ದಿನದೊಳಗೆ ನೀರು ಅವರಿಗೆ ಲಭಿಸಲಿದೆ. ಇದರಿಂದ ಎರಡು ಮೂರು ತಿಂಗಳಿಂದ ಬಾಯಾರಿಕೆಯಿಂದ ಬಸವಳಿದ ಜನತೆಯ ಹೊಟ್ಟೆ ತಣ್ಣಗಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.