ಬೆಳಗಾವಿ: ಮಹದಾಯಿ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗದ ರಾಜ್ಯದ 25 ಬಿಜೆಪಿ ಸಂಸದರು ಕೈಲಾಗದವರು ಎಂದು ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿಗೆ ಪರಿಸರ ಇಲಾಖೆ ತಡೆ ನೀಡಿದೆ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಅನ್ಯಾಯ ಮಾಡಿದೆ. ರಾಜ್ಯದಿಂದ 25 ಸಂಸದರು ಬಿಜೆಪಿಯಿಂದ ಆಯ್ಕೆಯಾದಾಗ ಯೋಜನೆ ಜಾರಿಯಾಗುವ ಕನಸು ಕಂಡಿದ್ದೆವು. ಪ್ರಹ್ಲಾದ ಜೋಶಿ ಅವರು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರೂ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹದಾಯಿ ಯೋಜನೆ ಜಾರಿ ವಿಚಾರವಾಗಿ 60 ವರ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ಈ ಬೇಡಿಕೆ ಈಡೇರಿಸುವುದಾಗಿ ಹೇಳಿಕೊಂಡು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರೈತರನ್ನು ಬಲಿಕೊಡುತ್ತಲೇ ಬಂದಿವೆ. ಇಷ್ಟು ದಿನ ಶಾಂತಿಯುತ ಪ್ರತಿಭಟನೆ ನಡೆಸಲಾಗಿತ್ತು. ಇನ್ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಹ್ಲಾದ ಜೋಶಿ ಅವರು ನಿತ್ಯ ಮಲಪ್ರಭಾ ನೀರನ್ನೇ ಕುಡಿಯುತ್ತಾರೆ. ಆದರೆ, ಯೋಜನೆ ಜಾರಿಗೆ ಮಾತ್ರ ಪ್ರಧಾನಿ ಮೋದಿ ಮೇಲೆ ಒತ್ತಡ ಹೇರುತ್ತಿಲ್ಲ. ಮೂರು ಬೊಗಸೆ ಮಹದಾಯಿ ನೀರು ಕುಡಿದು ಸಾಯಬೇಕು ಎಂದುಕೊಂಡಿದ್ದೆ. ಯೋಜನೆ ಜಾರಿ ಆಗುತ್ತಿಲ್ಲ. ಅದಕ್ಕೆ ಸಂಸದರ ಬಾಯಲ್ಲಿ ಮೂರು ಹಿಡಿ ಮಣ್ಣು ಹಾಕಿ ಸಾಯುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.