ಬೆಳಗಾವಿ: ರೈತರಿಗೆ ಹಾಗೂ ಬಡ ಕುಟುಂಬಗಳಿಗೆ ಬೆಳಕು ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ. ಗುರುತಿನ ಚೀಟಿ ಹೊಂದಿದ ತೋಟ ಪಟ್ಟಿ ಮನೆಗಳು, ಹೊರವಲಯದ ಮನೆಗಳು, ಹಾಗೂ ವಿದ್ಯುತ್ ಸಂಪರ್ಕ ಇಲ್ಲದ ಪ್ರತಿ ಮನೆಗಳಿಗೆ ಬೆಳಕು ಯೋಜನೆ ಮೂಲಕ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಮಂಗಳವಾರ ಇಂಧನ ಇಲಾಖೆಯ ಬೆಳಕು ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಬೆಳಕು ಯೋಜನೆ ಮೂಲಕ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು. ರೈತರಿಗೆ ಟಿಸಿ ಒದಗಿಸಲು ರೈತರು ಯಾವುದೇ ವಾಹನ ಬಳಸುವ ಅವಶ್ಯಕತೆ ಇಲ್ಲ. ಇಂಧನ ಇಲಾಖೆಯ ವಾಹನಗಳ ಮೂಲಕ ರೈತರಿಗೆ ಟಿಸಿ ಒದಗಿಸಲಾಗುವುದು. ಸರ್ಕಾರದಿಂದ ಅತಿ ಹೆಚ್ಚು ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರ ಪಂಪ್ ಸೆಟ್, ರೈತರ ಮನೆಗಳ ವಿದ್ಯುತ್, ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ವಿದ್ಯುತ್ ಶಕ್ತಿ ಇತ್ತೀಚಿನ ದಿನಗಳಲ್ಲಿ ಬಹಳ ಪ್ರಾಮುಖತೆ ಪಡೆದಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ವಿದ್ಯುತ್ ಇಲಾಖೆ ನೆರವಾಗಿದೆ. ರೈತರಿಗೆ ದಿನ ಅಲೆದಾಡುವ ಪರಿಸ್ಥಿತಿ ಎದುರಾಗಿದ್ದು, ಈ ವ್ಯವಸ್ಥೆ ತೆಗೆದು ಹಾಕಲು ಈ ಯೋಜನೆ ಜಾರಿಗೆ ತರಲಾಗಿದೆ. ಸಮಯಕ್ಕೆ ಸರಿಯಾಗಿ ರೈತರಿಗೆ ಸ್ಪಂದಿಸಲಾಗುವದು. ಬೀದಿ ಕಂಬಗಳು, ವಿದ್ಯುತ್ ಪರಿವರ್ತಕ ದುರಸ್ತಿ ಹಾಗೂ ಯಾವುದೇ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಓದಿ: ಸಾವು ಬದುಕಿನ ಮಧ್ಯೆ ಹೋರಾಡುತ್ತಿರೋ ಅಪ್ಪಟ ಅಭಿಮಾನಿ ಆಸೆ ಪೂರೈಸಿದ ತಲೈವಾ
ದಿನದ 24 ಗಂಟೆಗಳ ಕಾಲ ವಿದ್ಯುತ್ ಶಕ್ತಿ ಒದಗಿಸಲಾಗುವುದು. ಕೇಂದ್ರ ಸರ್ಕಾರದ ಆರ್. ಡಿ.ಎಸ್.ಎಸ್ ಅನುದಾನ ಬಳಸಿಕೊಂಡು ಹೆಚ್ಚಿನ ಯೋಜನೆಗಳ ಮೂಲಕ ರೈತರಿಗೆ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಂತ್ರಿಗಳು ತಿಳಿಸಿದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲಕುಮಾರ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಬೆಳಕು ಯೋಜನೆ ಇದಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಿಸುವವರು ಗ್ರಾ.ಪಂ ಗಳಲ್ಲಿ ಎನ್.ಓ.ಸಿ ಪಡೆಯದೇ ವಿದ್ಯುತ್ ಸಂಪರ್ಕ ಒದಗಿಸುವಂತಹ ಮಹತ್ತರ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ರೈತರ ಹೊಲಗಳಲ್ಲಿರುವ ಟಿ.ಸಿ.ಸುಟ್ಟು ಹೋದರೆ ಕೇವಲ ಇಪ್ಪತ್ತನಾಲ್ಕು ಗಂಟೆಯಲ್ಲಿ ಬದಲಾಯಿಸುವ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಅದರಂತೆ ವಿದ್ಯುತ್ ಪರಿವರ್ತಕ ಬದಲಾವಣೆಗಾಗಿ 198 ಪರಿವರ್ತಕ ಬ್ಯಾಂಕುಗಳ ಮೂಲಕ ಈವರೆಗೆ 19830 ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಲಾಗಿರುತ್ತದೆ ಎಂದರು.
ತೋಟದ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಬೇಡಿಕೆ ಅನುಗುಣವಾಗಿ ಹೆಸ್ಕಾಂ ವತಿಯಿಂದ ಈಗಾಗಲೇ ಸಮಿಕ್ಷಾ ಕಾರ್ಯ ಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ತೋಟದ ಮನೆಗಳಿಗೂ ವಿಧ್ಯುತ ವಿತರಣೆಗೆ ಅಗತ್ಯದ ಕ್ರಮ ಕೈಗೊಳ್ಳಲಾಗುವದು ಎಂದು ನುಡಿದರು.