ಅಥಣಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೃಷ್ಣಾ ನದಿ ನೀರಿನ ಪ್ರಮಾಣ ಒಂದೇ ರಾತ್ರಿಯಲ್ಲಿ 12 ಅಡಿ ಏರಿಕೆಯಾಗಿದ್ದು, ಕೃಷಿ ನೀರಾವರಿ ಪಂಪ್ಸೆಟ್ ಮುಳುಗಡೆಯಾಗಿವೆ. ಅಲ್ಲದೆ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಉಂಟಾಗಿದೆ.
ಈ ಕುರಿತು ರೈತ ಹಾಗೂ ಭಾರತಿ ಕಿಸಾನ್ ಸಂಘದ ಕಾರ್ಯಾಧ್ಯಕ್ಷ ಭರಮು ನಾಯಕ ಮಾತನಾಡಿ, ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳ ಜೊತೆ ಜಿಲ್ಲಾಡಳಿತ ಸಂಪರ್ಕದಲ್ಲಿರದ ಕಾರಣ ಮಹಾರಾಷ್ಟ್ರದ ಆಣೆಕಟ್ಟೆಗಳಿಂದ ದೊಡ್ಡ ಪ್ರಮಾಣದ ನೀರು ಬರುತ್ತಿದೆ, ಕ್ಷಣಕ್ಷಣಕ್ಕೂ ತಾಲೂಕು ಆಡಳಿತ ರೈತರಿಗೆ ನೀರಿನ ಪ್ರಮಾಣದ ಮಾಹಿತಿ ನೀಡಬೇಕು. ಸದ್ಯ ಈ ಅವಾಂತರಕ್ಕೆ ಸರ್ಕಾರ ನೇರ ಹೊಣೆಯಾಗುತ್ತದೆ.
ಅಲ್ಲದೆ ಕಳೆದ ಬಾರಿಯ ನೆರೆ ಸಂತ್ರಸ್ತರಿಗೆ ಪರಿಹಾರ ಇನ್ನೂ ಬಂದಿಲ್ಲಾ ಮತ್ತೆ ಏನಾದರೂ ಪ್ರವಾಹ ಬಂದರೆ ರೈತ ಸ್ಥಿತಿ ದೇವರಿಗೆ ಬಿಟ್ಟಿದ್ದು ಎಂಬಂತೆ ಆಗುತ್ತದೆ ನಮ್ಮ ಬದುಕು ಎಂದು ಕಳವಳ ವ್ಯಕ್ತಪಡಿಸಿದರು.
ಸದ್ಯ ನೀರಿನ ಪ್ರಮಾಣ ಇದೇ ರೀತಿ ಮುಂದುವರೆದರೆ ದರೂರು ಹಲ್ಯಾಳ ಬ್ಯಾರೇಜ್ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರಿಂದ ಬಾಗಲಕೋಟೆ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಗೆ ಸಂಪರ್ಕ ಕಡಿತಗೊಳ್ಳುವದು.