ಅಥಣಿ: ಕೃಷ್ಣಾ ನದಿ ಪ್ರವಾಹದಿಂದ ನೆರೆ ಸಂತ್ರಸ್ತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಸತತ ಮೂರು ವರ್ಷಗಳಿಂದ ಪ್ರವಾಹದಿಂದಾಗಿ ನಲುಗಿ ಹೋಗಿರುವ ಸಂತ್ರಸ್ತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರವಾಹದಲ್ಲಿ ಹಾನಿಯಾದ ಮನೆಗಳಿಗೆ ಐದು ಲಕ್ಷ ರೂ., ಅರ್ಧ ಮನೆ ಹಾನಿ ಸಂಭವಿಸಿದ ಮನೆಗೆ ಮೂರು ಲಕ್ಷ, ಅಲ್ಪಪ್ರಮಾಣದಲ್ಲಿ ಹಾನಿಯಾದ ಮನೆಗೆ ಒಂದು ಲಕ್ಷ ರೂಪಾಯಿ ಎಂದು ಸರ್ಕಾರ ಘೋಷಣೆ ಮಾಡಿತ್ತು. ಆದರೆ ಅಥಣಿ ತಾಲೂಕಿನ 14 ಹಳ್ಳಿಗಳು ನೆರೆ ಬಾಧಿತ ಗ್ರಾಮಗಳಾಗಿದ್ದು, ಸಾವಿರಾರು ಮನೆಗಳು ಪ್ರವಾಹದಲ್ಲಿ ಹಾನಿಯಾಗಿವೆ. ಇದುವರೆಗೆ ಸರ್ಕಾರದಿಂದ ಸರಿಯಾದ ಪರಿಹಾರ ಧನ ಕೂಡ ಬಂದಿಲ್ಲವೆಂದು ನೆರೆ ಸಂತ್ರಸ್ತರು ಆರೋಪಿಸಿದ್ದಾರೆ.
2019 - 2020- 2021 ನೇ ವರ್ಷದಲ್ಲಿ ನಿರಂತರವಾಗಿ ಕೃಷ್ಣಾ ನದಿ ಪ್ರವಾಹದಿಂದ ಅಥಣಿ ತಾಲೂಕಿನ 14 ಹಳ್ಳಿಗಳು ಜಲಾವೃತವಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದೆ. ಆದರೆ ಇದುವರೆಗೆ ಸರ್ಕಾರದಿಂದ ತಾಲೂಕಿನ ನೆರೆ ಸಂತ್ರಸ್ತರಿಗೆ ಮನೆ ಮಂಜೂರು ಆಗಿಲ್ಲ. ಇದರೊಂದಿಗೆ ಸಾವಿರಾರು ಹೆಕ್ಟೇರ್ ಕಬ್ಬು ಜಲಾವೃತವಾಗಿ ಹಾಳಾಗಿದ್ದು, ಸರ್ಕಾರ ಮಾತ್ರ ಪ್ರತಿ ಎಕರೆಗೆ 5 ಸಾವಿರ ರೂಪಾಯಿ ಪರಿಹಾರ ಹಣ ನೀಡಿದೆ. 10,000 ರೂಪಾಯಿ ತುರ್ತಾಗಿ ಹಣ ನೀಡುತ್ತೇನೆ ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. ಆದರೆ ಅಥಣಿ ತಾಲೂಕಿನ ಝುಂಜರವಾಡ, ಸವದಿ, ಶಿರಹಟ್ಟಿ, ಬಳವಾಡ ಈ ನಾಲ್ಕು ಗ್ರಾಮಗಳ ನೆರೆ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಧನ ಬಂದಿಲ್ಲ ಎಂದು ಗ್ರಾಮಸ್ಥರು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
'ಈಟಿವಿ ಭಾರತ' ಜೊತೆ ಮಾತನಾಡಿದ ಅಥಣಿ ಮಾಜಿ ಶಾಸಕ ಶಹಜಾನ್ ಡೊಂಗರಗಾಂವ್, ಕಳೆದ ಮೂರು ವರ್ಷಗಳಿಂದ ಕೃಷ್ಣಾ ನದಿ ಪ್ರವಾಹದಿಂದ ತಾಲೂಕಿನ ಜನರು ತತ್ತರಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿವೆ. ತಾಲೂಕಿನ ನೆರೆ ಸಂತ್ರಸ್ತರಿಗೆ ಸರಿಯಾಗಿ ಬೆಳೆ ಹಾಗೂ ಮನೆ ಪರಿಹಾರ ಧನ ಬಿಡುಗಡೆಯಾಗಿಲ್ಲ. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಅಥಣಿ ತಾಲೂಕಿನ ನೆರೆ ಸಂತ್ರಸ್ತರಿಗೆ ಪರಿಹಾರ ಧನ ಬಿಡುಗಡೆ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ನೆರೆ ಸಂತ್ರಸ್ತರಾದ ಮಲ್ಲಪ್ಪ ಯಡೂರು ಹಾಗೂ ಹನುಮಂತ ಸನದಿ ಮಾತನಾಡಿ, ಇದುವರೆಗೆ ನಮ್ಮ ಗ್ರಾಮಕ್ಕೆ ಸರ್ಕಾರದಿಂದ ನೆರೆ ಪರಿಹಾರ ಧನ ಬಂದಿಲ್ಲ. ರಾಜಕೀಯ ನಾಯಕರ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಾವು ಮುರುಕಲು ಮನೆಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಜಿಲ್ಲೆಯಲ್ಲಿ ಪ್ರಭಾವಿ ನಾಯಕರುಗಳಿದ್ದರೂ ನಮಗೆ ನ್ಯಾಯ ಸಿಗುತ್ತಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಕಣ್ಣು ತೆರೆಸುವ ಮೂಲಕ ಅಥಣಿ ಭಾಗದ ನೆರೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಸಲ್ಲಿಸಿದರು.