ಬೆಳಗಾವಿ : ತಾವು ಪಾಪರ್ ಆಗಿದೀವಿ ಎಂದು ಪತ್ರಿಕೆಯಲ್ಲೇ ಜಾಹೀರಾತು ನೀಡಿದ್ದಾರೆ. ಈ ಬಗ್ಗೆ ಸಿಎಂ ಮತ್ತು ಸಹಕಾರಿ ಸಚಿವರು ಉತ್ತರ ನೀಡಬೇಕು. ಸಾಹುಕಾರರು ಪಾಪರ್ಗಳಾಗಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಹಕಾರಿ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪದ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಾಹುಕಾರ್‌ಗಳೆಲ್ಲ ಪಾಪರ್‌ಗಳಾಗುತ್ತಿದ್ದಾರೆ. ನಮ್ಮನ್ನೆಲ್ಲ ಪಾಪರ್ ಮಾಡಿಕೊಡಿ ಎಂದು ಮ್ಯಾಚ್ ಫಿಕ್ಸಿಂಗ್ ನಡೀತಿದೆ. ಸಿಎಂ, ಸಹಕಾರ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಎಲ್ಲದಕ್ಕೂ ರೇಟ್ ಫಿಕ್ಸ್ ಆಗಿದೆ : ಸಿಎಂ ಆಗಲು 2500 ಕೋಟಿ ರೂಪಾಯಿ ನೀಡಬೇಕು ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ್ ಸಾಮಾನ್ಯ ವ್ಯಕ್ತಿಯಲ್ಲ. ಕೇಂದ್ರದ ಮಾಜಿ ಮಂತ್ರಿ, ಹಾಲಿ ಶಾಸಕರು. ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ಫಿಕ್ಸ್ ಆಗಿದೆ ಅಂತಾ ಹೇಳಿದ್ದಾರೆ. ಇಂಜಿನಿಯರ್, ಪಿಎಸ್ಐ ಪೋಸ್ಟಿಂಗ್‌ಗೆ ಎಷ್ಟು ರೇಟ್ ಫಿಕ್ಸ್ ಆಗಿದೆ. ಮುಖ್ಯಮಂತ್ರಿಯಿಂದ ಹಿಡಿದು ಜವಾನ್ ಕೆಲಸದವರೆಗೂ ರೇಟ್ ಫಿಕ್ಸ್ ಆಗಿದೆ. 40 ಪರ್ಸೆಂಟ್ ಕಮಿಷನ್ ಫಿಕ್ಸ್ ಆಗಿದೆ. ಇದಕ್ಕಿಂತ ಇನ್ನೇನು ಬೇಕು ಎಂದು ವ್ಯಂಗ್ಯವಾಡಿದರು.
ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಯಂತ್ರಿಸಲು ಆಗ್ತಿಲ್ಲ. ಯಾರ ವಿರುದ್ಧವೂ ಕ್ರಮಕೈಗೊಳ್ಳಲು ಆಗುತ್ತಿಲ್ಲ. ಅಧಿಕಾರಿಗಳು, ಶಾಸಕರು, ಮಂತ್ರಿಗಳ ಮೇಲೆ ಕ್ರಮಕೈಗೊಳ್ಳಲು ಆಗ್ತಿಲ್ಲ. ಅದಕ್ಕಾಗಿಯೇ ಈ ಪರಿಸ್ಥಿತಿ ಉದ್ಭವವಾಗಿದೆ ಎಂದರು.