ಬೆಳಗಾವಿ: ಪ್ರತಿ ಲೀಟರ್ ನಂದಿನಿ ಹಾಲಿಗೆ 3 ರೂ. ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ. ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿ, ವಿದ್ಯುತ್, ಸಾಗಣೆ ವೆಚ್ಚ ಶೇ.30ರಷ್ಟು ಹೆಚ್ಚಳವಾಗಿದೆ. ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗಿಸಲು ಹಾಲಿನ ದರ ಹೆಚ್ಚಿಸುವಂತೆ ಸಿಎಂಗೆ ಬಾಲಚಂದ್ರ ಜಾರಕಿಹೊಳಿ ಕೋರಿದ್ದಾರೆ.
ಈ ಕುರಿತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಅಮೂಲ್ ಸೇರಿ ದೇಶದ ವಿವಿಧ ಸಹಕಾರ ಮತ್ತು ಖಾಸಗಿ ಸಂಸ್ಥೆಗಳು ಹಾಲಿನ ದರ ಹೆಚ್ಚಿಸಿವೆ. ನಂದಿನಿ ಹಾಲಿನ ಮಾರಾಟ ದರಕ್ಕೆ ಹೋಲಿಸಿದರೆ ಲೀಟರ್‌ಗೆ 8 ರಿಂದ 10 ರೂ. ಹೆಚ್ಚಳವಾಗಿದೆ. ಹೀಗಾಗಿ ನಂದಿನಿ ಹಾಲಿನ ಮಾರಾಟ ದರ ಕನಿಷ್ಠ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳಕ್ಕೆ ಸಿಎಂ ಕ್ರಮ ಕೈಗೊಳ್ಳಬೇಕು.
ಹೆಚ್ಚಳ ಮಾಡಲಿರುವ 3 ರೂ.ಗಳಲ್ಲಿ ಕನಿಷ್ಠ 2 ರೂ. ಹಾಲು ಉತ್ಪಾದಕರಿಗೆ ಹಾಗೂ ಉಳಿದ 1 ರೂ. ಹಾಲು ಉತ್ಪಾದಕರ ಸಹಕಾರಿ ಸಂಘ, ಹಾಲು ಒಕ್ಕೂಟ, ಹಾಲು ಮಾರಾಟಗಾರರಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಎಂಎಫ್ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯ..!