ಚಿಕ್ಕೋಡಿ (ಬೆಳಗಾವಿ): ಜಿಲ್ಲೆಯ ಕಾಗವಾಡ ಹಾಗೂ ಅಥಣಿ ತಾಲೂಕುಗಳು ಬೆಳಗಾವಿಯಿಂದ ಸುಮಾರು 150 ಕಿ.ಮೀ ದೂರದಲ್ಲಿದ್ದು, ಈ ಎರಡೂ ಗಡಿ ತಾಲೂಕಿನ ಜನರು ಮಹಾರಾಷ್ಟ್ರದ ಮಿರಜ್, ಸಾಂಗಲಿ, ಕೊಲ್ಲಾಪೂರ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿದ್ದಾರೆ. ಆದ್ರೀಗ ಕೊರೊನಾ ವೈರಸ್ನಿಂದ ಮಹಾರಾಷ್ಟ್ರ-ಕರ್ನಾಟಕ ಸಂಪರ್ಕ ಬಂದ್ ಆಗಿದ್ದು, ಗಡಿ ತಾಲೂಕಿನ ಗ್ರಾಮದ ಜನರು ಪರದಾಡುವಂತಾಗಿದೆ.
ಈಗಾಗಲೇ ಅಥಣಿ ಮತ್ತು ಕಾಗವಾಡ ತಾಲೂಕಿನಿಂದ ಒಬ್ಬರು ಡಿಸಿಎಂ, ಇನ್ನೊಬ್ಬರು ಸಚಿವರಿದ್ದರೂ ಈ ಭಾಗದಲ್ಲಿ ಸರಿಯಾದ ಆಸ್ಪತ್ರೆಗಳಿಲ್ಲದೆ ಈ ಭಾಗದ ಜನರು ಪ್ರತಿದಿನ ಕಣ್ಣೀರಿಡುತ್ತಿದ್ದಾರೆ. ಮಧುಮೇಹ, ಹೃದಯರೋಗ, ಡಯಾಲಿಸಿಸ್, ಬಿಪಿ ಹಾಗೂ ಅಪಘಾತಕ್ಕೊಳಗಾದವರು ಸೇರಿ ಈ ತಾಲೂಕುಗಳ ರೋಗಿಗಳು ಮಹಾರಾಷ್ಟ್ರದ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿದ್ದಾರೆ. ಇದೀಗ ಕೊರೊನಾ ವೈರಸ್ನಿಂದಾಗಿ ಅಂತರರಾಜ್ಯ ಸಂಪರ್ಕ ಕಡಿತವಾಗಿದ್ದರಿಂದ, ಗಡಿ ತಾಲೂಕಿನ ಜನರು ಪರದಾಡುವಂತಾಗಿದೆ.
ಅಥಣಿ ಹಾಗೂ ಕಾಗವಾಡ ತಾಲೂಕುಗಳ ಜನರು, ಬೆಳಗಾವಿ ಜಿಲ್ಲಾಸ್ಪತ್ರೆಗೆ ತೆರಳಬೇಕಾದರೆ ಮೂರು ಗಂಟೆ ಸಮಯ ಬೇಕು. ಅಲ್ಲಿ ತಪಾಸಣೆ ಪಡೆದು ಮತ್ತೆ ತಮ್ಮ ಊರುಗಳಿಗೆ ತೆರಳುವಷ್ಟರಲ್ಲಿ ಮಧ್ಯರಾತ್ರಿಯಾಗುತ್ತದೆ. ಆದರೆ, ಮಹಾರಾಷ್ಟ್ರದ ಸಾಂಗಲಿ, ಮಿರಜ್ ಈ ತಾಲೂಕುಗಳಿಂದ 40-50 ಕಿ.ಮೀ ಇದೆ. ಹೀಗಾಗಿ ವೈದ್ಯಕೀಯ ಸೇವೆ ಪಡೆಯಲು ಕಳ್ಳದಾರಿ ಮೂಲಕ ಮಹಾರಾಷ್ಟ್ರಕ್ಕೆ ಹೋಗಿ ಬರುತ್ತಿದ್ದಾರೆ.
ಈ ಕಷ್ಟ ಇಂದು, ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ಜನರು ಈ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ನಮಗೆ ಒಳ್ಳೆಯ ಆಸ್ಪತ್ರೆ ನಿರ್ಮಿಸಿ ಕೊಡಿ ಎಂದು ಹಲವಾರು ಬಾರಿ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ. ಈಗಲಾದರೂ ಕಾಗವಾಡ ಕ್ಷೇತ್ರದ ಸಚಿವ ಶ್ರೀಮಂತ ಪಾಟೀಲ ಹಾಗೂ ಅಥಣಿಯವರಾದ ಡಿಸಿಎಂ ಲಕ್ಷ್ಮಣ ಸವದಿ ಅವರು, ಈ ಎರಡು ತಾಲೂಕಿನ ಜನರಿಗೆ ಒಂದು ಆಸ್ಪತ್ರೆ ನಿರ್ಮಿಸಿ ಕೊಡ್ತಾರಾ? ಕಾದು ನೋಡಬೇಕಿದೆ.