ಬೆಳಗಾವಿ: ಜೆಡಿಎಸ್ ಶಾಸಕಾಂಗ ಸಭೆ ಸುವರ್ಣವಿಧಾನಸೌಧದಲ್ಲಿ ನಡೆಯಿತು. ಪಕ್ಷದ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ, ಶಾಸಕ ಅನ್ನದಾನಿ ಸೇರಿದಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಜೆಡಿಎಸ್ ಸದಸ್ಯರು ಭಾಗಿಯಾಗಿದ್ದರು.
ಸಭೆ ನಂತರ ಮಾತನಾಡಿರುವ ಹೆಚ್. ಡಿ ರೇವಣ್ಣ, ಸದನದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕಾದ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು, ಕೃಷ್ಣ, ಮಹದಾಯಿ ವಿಚಾರಗಳ ಬಗ್ಗೆ, ಕೋವಿಡ್ ವಿಚಾರದಲ್ಲಿ ಸರ್ಕಾರದ ವೈಫಲ್ಯ, ಮೂರನೇ ಅಲೆ ಎದುರಾದರೆ ಸರ್ಕಾರದ ಕ್ರಮಗಳೇನು? ಈ ಎಲ್ಲ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲು ಈ ಸಭೆ ಕರೆಯಲಾಗಿದೆ. ಜನ ಸಾಮಾನ್ಯರಿಗೆ ಅನುಕೂಲ ಆಗಿದ್ದರೆ ಅದು ಕುಮಾರಣ್ಣನ ಸರ್ಕಾರದಲ್ಲಿ ಮಾತ್ರ. ಕೊಡಗು, ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ ಆಯ್ತು. ಆಗ ಕುಮಾರಸ್ವಾಮಿ ತಕ್ಷಣಕ್ಕೆ ಎಲ್ಲ ಸರಿ ಮಾಡಿ ಎಂದರು. ತಕ್ಷಣವೇ ಕಾರ್ಯ ಪೂರೈಸಲಾಗಿತ್ತು ಎಂದು ವಿವರಿಸಿದರು.
ಮಳೆಯಿಂದ ರಾಜ್ಯದಲ್ಲಿ ದೊಡ್ಡ ನಷ್ಟವಾಗಿದ್ದು, ನನ್ನ ಜಿಲ್ಲೆಯಲ್ಲೂ ಸಾಕಷ್ಟು ನಷ್ಟವಾಗಿದೆ. ಎನ್ಡಿಆರ್ಎಫ್ನಿಂದ ಕಡಿಮೆ ಹಣ ಬಂದಿದೆ. ಅದನ್ನು ತಗೊಂಡು ರೈತ ಏನ್ ಮಾಡ್ತಾನೆ. ಒಂದು ಎಕರೆಗೆ 30 ಸಾವಿರ ಖರ್ಚು ಮಾಡ್ತಾನೆ. ಇವರು ನೀಡುವುದು 13 ಸಾವಿರ ಮಾತ್ರ. ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡಬೇಕಿದೆ. ಮೆಣಸು, ಏಲಕ್ಕಿ ಬೆಳೆ ಇವೆಲ್ಲ ಉಳಿದೇ ಇಲ್ಲ. ಬೆಳೆ ಹಾನಿ ಪ್ರದೇಶಕ್ಕೆ ಪ್ರಧಾನಿಗಳು ಭೇಟಿ ನೀಡಬೇಕಿತ್ತು. ಇವತ್ತು ಅತಿವೃಷ್ಟಿಗೆ ಮೊದಲ ಆದ್ಯತೆ ಕೊಡಬೇಕು. ರಾಜಕೀಯದ ಬಗ್ಗೆ ಅಮೇಲೆ ಮಾತಾಡೋಣ ಎಂದರು.
ಗುಂಡಿನಾದ್ರೂ ಮುಚ್ಚಪ್ಪ ಹೋಗಲಿ, ಅತೀ ಮಳೆಯಾಗಿರೋ ಕಡೆ ಗುಂಡಿನಾದ್ರೂ ಮುಚ್ಚಿ ಅಂದ್ವಿ. ಎರಡು ವರ್ಷದಿಂದ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಲಾಗಿಲ್ಲ. ಗ್ರಾಮೀಣ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಬೇಕು. ಕುಮಾರಸ್ವಾಮಿಯವರ ಆಸೆಯೂ ಅದೇ. ಮೊದಲು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕಿದೆ ಎಂದರು.
ಕೋವಿಡ್ ಮೂರನೇ ಅಲೆ ತಡೆಯಲು ಯಾವ ತಯಾರಿ ರೀತಿ ಮಾಡಿದ್ದಾರೆ. ಕಳೆದ ಬಾರಿ ಆದಂಗೆ ಈ ಬಾರಿ ಆಗಬಾರದು. ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಈ ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ ಎಂದರು.
ಕುಟುಂಬ ರಾಜಕಾರಣ ವಿಚಾರದ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಅವರವರ ಶಕ್ತಿ ಮೇಲೆ ಅಭ್ಯರ್ಥಿಗಳು ಗೆಲ್ತಾರೆ. ಹಿಂದಿನ ಬಾಗಿಲಿನಿಂದ ಯಾರೂ ಹೋಗಿಲ್ಲ. ಜನರ ಮುಂದೆ ಹೋಗಿದಿವಿ ನಾವು ನಮ್ಮ ಪಕ್ಷ ಬೈಯದೇ ಇದ್ರೆ ಊಟ ಸೇರಲ್ಲ ಅವಿಗೆ, ಕುಟುಂಬ ರಾಜಕಾರಣ ಅಲ್ಲ ಇದು. ದೇವರ ಅನುಗ್ರಹ ಹಾಗೂ ಜನರ ಆಶೀರ್ವಾದ ಅಷ್ಟೇ. ಕುಟುಂಬದ ರಾಜಕಾರಣ ಬಗ್ಗೆ ಒಂದು ಮಸೂದೆ ತರಲಿ, ಇದಕ್ಕೆ ಇತ ಹಾಡಬೇಕು ಅಂದರೆ ರಾಷ್ಟ್ರೀಯ ಪಕ್ಷಗಳು ಎರಡು ಇದಕ್ಕೆ ಒಪ್ಪಿಗೆ ಸೂಚಿಸಲಿ.ಕೇಂದ್ರಕ್ಕೆ ಈ ಬಗ್ಗೆ ನಿರ್ಣಯ ಕಳುಹಿಸಲಿ, ನಾವು ರೆಡಿ ಇದ್ದೀವಿ, 2023 ಕ್ಕೆ ಕುಮಾರಸ್ವಾಮಿಯವರಿಗೆ ದೇವರು ಶಕ್ತಿ ಕೊಡ್ತಾನೆ. ಈಗೇನು ನಾನು ಮಾತಾಡಲ್ಲ ಎಂದರು.
ವಿಧಾನಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆ ಮಾತು
ವಿಧಾನಪರಿಷತ್ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ರಾಜ್ಯದಲ್ಲಿ ಎರಡು ಪಕ್ಷಗಳ ಬಗ್ಗೆ ಯಾರು ಬೈತಾರೆ. ಈ ಎರಡು ಪಕ್ಷಗಳಿಗೆ ನಮ್ಮ ಬಗ್ಗೆ ಯೋಚನೆ ಮಾಡದೇ ಇದ್ರೆ ಊಟ ಕರಗಲ್ಲ. ಕೋಮವಾದ ದೂರ ಇಡಬೇಕು. ಆದರೆ, ಅವರ ಜೊತೆಗೆ ಹೋಗ್ತಾರೆ. ಜನ ಇದನ್ನು ತಿಳಿದುಕೊಳ್ಳಬೇಕು. ಮ್ಯಾಚ್ ಫಿಕ್ಸಿಂಗ್ ಅಂದ್ರೆ ನಾವ್ ಹೇಳಿದ್ರೆ ತಪ್ಪಾಗುತ್ತೆ. ಯಾರು ಯಾವ ಟೀಂ ಅನ್ನೋದು ಗೊತ್ತಾಗ್ತಾ ಇದೆ. ನಮಗೆ ಬಡವರದ್ದೇ ದಿಕ್ಸೂಚಿ. ಎಲ್ಲಾ ಬಟ್ಟೆಗಿಟ್ಟೆ ಹೊಲಿಸಿಕೊಂಡು ರೆಡಿಯಾಗಿದ್ದಾರೆ. ನಾವು ದೇವರನ್ನು ನಂಬಿದ್ದೇವೆ. ರೈತರ ಸಾಲ ಮನ್ನಾ ಮಾಡಿದ್ದು ಕುಮಾರಣ್ಣ, ಕುಟುಂಬ ರಾಜಕಾರಣ ಅಂತಾರೆ, ಆಗ ಕಾಂಗ್ರೆಸ್ನಲ್ಲಿ ಏನಾಯ್ತು? ಎಂದರು.
ಪಕ್ಷದಿಂದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡ್ತೀವಿ: ಬಂಡೆಪ್ಪ ಕಾಶಂಪುರ್
ನಮ್ಮ ಪಕ್ಷದಿಂದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಮಾಜಿ ಸಚಿವ ಬಂಡೆಪ್ಪ ಕಾಂಶೆಂಪುರ್ ತಿಳಿಸಿದ್ದರು. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿ, ಬಿಎಸ್ಸಿ ಮೀಟಿಂಗ್ನಲ್ಲಿ ಚರ್ಚೆ ಆಗಿದೆ. ಮಹದಾಯಿ ಸೇರಿದಂತೆ ಎಲ್ಲವನ್ನೂ ಚರ್ಚೆ ಮಾಡಲಿದ್ದೇವೆ. ಇಲ್ಲಿ ಅಧಿವೇಶನ ನಡೆಯೋದಿಕ್ಕೆ ಕುಮಾರಸ್ವಾಮಿಯವರೇ ಕಾರಣ. ಅವರಿಂದಲೇ ಅಲ್ಲಿನವರು ಇಲ್ಲಿ ಬಂದು ಇಲ್ಲಿನ ಸ್ಥಿತಿ ನೋಡುವಂತಾಗಿದೆ ಎಂದರು. ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿರಲಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿರಲಿಲ್ಲ. ಮುಂಬರುವ ದಿನಗಳಲ್ಲಿ ಅವಕಾಶ ಸಿಕ್ಕ ಸಂದರ್ಭಗಳಲ್ಲಿ ಈ ಭಾಗದ ಸಮಗ್ರ ಅಭಿವೃದ್ಧಿಯ ಕುರಿತು ಪ್ರಸ್ತಾಪ ಮಾಡುತ್ತೇವೆ. ಯಾವ್ಯಾವ ಯೋಜನೆಗಳಿಗೆ ಈಗಾಗಲೇ ತೊಂದರೆ ಆಗಿದೆ ಎಂಬುದನ್ನು ಪಕ್ಷದ ವತಿಯಿಂದ ತೆಗೆದುಕೊಳ್ಳುತ್ತೇವೆ. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ತೆಗೆದುಕೊಂಡು ನಾವು ಚರ್ಚೆ ಮಾಡುತ್ತಿದ್ದೇವೆ ಎಂದರು.