ಬೆಳಗಾವಿ : ಎಂಇಎಸ್ ಮುಖಂಡ ದೀಪಕ ದಳವಿ ಮೇಲೆ ಮಸಿ ಸುರಿದ ಕನ್ನಡ ಹೋರಾಟಗಾರನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರ ನಡೆಗೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307ರಡಿ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ ಸೇರಿ 6 ಜನರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ್ ನಡೆಸುತ್ತಿದ್ದಲ್ಲದೆ, ನಾಡವಿರೋಧಿ ಘೋಷಣೆ ಕೂಗಿ ಉದ್ಧಟತನ ಪ್ರದರ್ಶಿಸಿದ್ದರು.
ಮಹಾಮೇಳಾವ್ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ್ದ ಸಂಪತ್‌ಕುಮಾರ್ ದೇಸಾಯಿ ನಿನಗೆ ಬೆಳಗಾವಿ ಬೇಕಾ? ಎಂದು ಪ್ರಶ್ನಿಸಿ ಎಂಇಎಸ್ ಬೆಳಗಾವಿ ಘಟಕದ ಅಧ್ಯಕ್ಷ ದೀಪಕ್ ಧಳವಿಗೆ ಮಸಿ ಬಳಿಸಿದ್ದರು. ಸಂಪತ್‌ಕುಮಾರ್ ಸೇರಿ ಆರು ಜನರ ವಿರುದ್ಧ ಎಂಇಎಸ್ ದೂರು ನೀಡಿತ್ತು. ದೂರಿನ ಮೇರೆಗೆ ಕೊಲೆ ಯತ್ನ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ವಾಪಸ್ ಪಡೆಯುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಆಗ್ರಹಿಸಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿಗೆ ಭೀಮಾಶಂಕರ ಪಾಟೀಲ್ ಪತ್ರ ಬರೆದಿದ್ದಾರೆ. ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸುಳ್ಳು ಕೇಸ್ ದಾಖಲಿಸಿದ್ದನ್ನು ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಕನ್ನಡ ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.