ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಕೊಗನೋಳಿ ರಾಷ್ಟ್ರೀಯ ಹೆದ್ದಾರಿ 4ರ ಟೋಲ್ನಾಕಾ ಬಳಿಯ ಚೆಕ್ಪೋಸ್ಟ್ನಲ್ಲಿ ದಾಖಲೆಯಿಲ್ಲದ ನಗದು ಹಾಗೂ ಬೆಳ್ಳಿಯ ಆಭರಣ ಕಾರಿನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ನಿಪ್ಪಾಣಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. 5 ಲಕ್ಷ ನಗದು ಹಾಗೂ ಅಂದಾಜು 1.5 ಕೆ.ಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ನಿಪ್ಪಾಣಿ ತಾಲೂಕಿನ ಕೊಗನೋಳಿ ಬಳಿ ನಿರ್ಮಿಸಿರುವ ಚೆಕ್ಪೋಸ್ಟ್ನಲ್ಲಿ ಎಸ್.ಎಸ್. ಟಿ. ತಂಡವು ವಾಹನಗಳ ಪರಿಶೀಲನೆ ನಡೆಸುತ್ತಿದ್ದಾಗ, ನಗದು ಹಾಗೂ ಬೆಳ್ಳಿ ಸಾಗಿಸುತ್ತಿರುವುದು ಗೊತ್ತಾಗಿದೆ. ನಿಪ್ಪಾಣಿ ತಾಲೂಕಿನ ಸಂದಲಗಾ ಗ್ರಾಮದ ಶೈಲೇಂದ್ರ ಸಿಂಗ್ ಮೋಹನಸಿಂಗ್ ರಜಪೂತ ಹಣ ಹಾಗೂ ಆಭರಣಗಳನ್ನು ಸಾಗಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ತೇಲಿ, ಅಬಕಾರಿ ಇಲಾಖೆ ಉಪನಿರೀಕ್ಷಕ ಬೆಳ್ಳುಬ್ಬಿ, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.