ಬೆಳಗಾವಿ: ನನ್ನ ಹೆಸರಲ್ಲಿ ಸೋಲಾರ್ ಪ್ಲ್ಯಾಂಟ್ ಇದ್ದರೆ, ಚಾಮುಂಡೇಶ್ವರಿ ಮೇಲಾಣೆ, ಅದನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೆಸರಲ್ಲಿ ಸೋಲಾರ್ ಪ್ಲ್ಯಾಂಟ್ ಇರುವ ಬಗ್ಗೆ ದಾಖಲಾತಿ ಇದ್ದರೆ ಕೊಡಿ. ಹಾಗೇನಿದಾರೂ ನನ್ನ ಹೆಸರಲ್ಲಿ ಇದ್ದರೆ ಅದರ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ನೀಡುವೆ ಎಂದರು.
ಗೋವಾ ಐಟಿ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ಮಾಡಿದಾಗ ಸಂಬಂಧ ಪಟ್ಟ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಹರ್ಷ ಶುಗರ್ಸ್ಗೆ ಹೂಡಿರುವ 120 ಕೋಟಿ ಅಕ್ರಮವಾದದ್ದು ಎಂಬ ಆರೋಪ ಇದೆ, ಅದು ಇನ್ನೂ ಸಾಬೀತಾಗಿಲ್ಲ. ಮಾಧ್ಯಮಗಳು ಕಪೋಲಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಆ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ದೂರಿದರು.
ಹೆಬ್ಬಾಳ್ಕರ್ ಅವರಿಗೆ ಲೋನ್ ನೀಡಿರುವ ವಿಚಾರವಾಗಿ ಇಡಿ ನನಗೆ ನೋಟಿಸ್ ನೀಡಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶಿಷ್ಟಾಚಾರದ ಪ್ರಕಾರ ಸಾಲ ಕೊಡುವುದಕ್ಕಿಂತ ಮುಂಚೆ ಬ್ಯಾಂಕ್ನವರು ಆಸ್ತಿಗಳನ್ನು ಬರೆಸಿಕೊಂಡಿದ್ದಾರೆ. ಅಪೆಕ್ಸ್ ಬ್ಯಾಂಕ್ ನನ್ನ ತಮ್ಮನ ಸಕ್ಕರೆ ಕಾರ್ಖಾನೆ ಹೆಸರು ಬರೆದುಕೊಂಡು ಲೋನ್ ನೀಡಿದೆ. 10 ಸಾವಿರ ಲೋನ್ ಪಡೆಯಬೇಕೆಂದರೆ ಸಾಕಷ್ಟು ದಾಖಲೆ ಸಲ್ಲಿಸಬೇಕಾಗುತ್ತದೆ. ಕ್ಷೇತ್ರದ ಜನರಿಗೆ ಪ್ರವಾಹದ ಪರಿಹಾರ ಕೊಡಿಸಲು ಪ್ರಯತ್ನ ಮಾಡುತ್ತಿದ್ದೇನೆ, ನಾನೂ ಕೂಡ ಪರಿಹಾರಕ್ಕೆ ಬಕಪಕ್ಷಿಯಂತೆ ಕಾಯುತ್ತಿದ್ದೇನೆ ಎಂದರು.