ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಜೊತೆಗೆ ಡೆಲ್ಟಾ ಪ್ಲಸ್ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ರಸ್ತೆಗಳನ್ನು ಬಂದ್ ಮಾಡಿ ಗಡಿ ಭಾಗದಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.
ರಾಜ್ಯದಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ರಸ್ತೆಗಳಾದ ಗಡಿ ಭಾಗದ ಚಿಕ್ಕೋಡಿ ತಾಲೂಕಿನ ಯಕ್ಸಂಬಾ - ದತ್ತವಾಡ, ಮಲಿಕವಾಡ - ಧಾನವಾಡ, ಸದಲಗಾ-ಧಾನವಾಡ ರಸ್ತೆಗಳನ್ನು ತಾಲೂಕು ಆಡಳಿತ ಬಂದ್ ಮಾಡಿದೆ. ರಾಜ್ಯದ ಗಡಿ ಹತ್ತಿರ ಹರಿಯುವ ದೂಧಗಂಗಾ ನದಿ ಸೇತುವೆ ಮೇಲೆ ರಸ್ತೆಗಳನ್ನು ಮಣ್ಣು - ಮುಳ್ಳುಗಳಿಂದ ರಸ್ತೆ ಬಂದ್ ಮಾಡಿದ್ದಾರೆ.
ನಿಪ್ಪಾಣಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕೊಗನ್ನೊಳ್ಳಿ ಚೆಕ್ಪೋಸ್ಟ್, ನಿಪ್ಪಾಣಿ ರಾಧಾನಗರಿ ರಸ್ತೆ ಚೆಕ್ಪೋಸ್ಟ್, ಚಿಕ್ಕೋಡಿ - ಇಚಲಕರಂಜಿ ರಾಜ್ಯ ಹೆದ್ದಾರಿಯ ಬೋರಗಾಂವ ಬಳಿ ಪೊಲೀಸ್ ಇಲಾಖೆ ಚೆಕ್ಪೋಸ್ಟ್ ಸ್ಥಾಪಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರು ಹೆಚ್ಚಿರುವ ಕಾರಣದಿಂದ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಾಗಿ ಹೊಂದಿರಬೇಕು. ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಇದ್ದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಇಡೀ ರಾಜ್ಯದಲ್ಲಿ ಎರಡನೆ ಅಲೆ ಇಳಿಮುಖವಾಗುತ್ತಿದೆ. ಆದರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ, ಇದರಿಂದ ಗಡಿ ಜನರಿಗೆ ಆತಂಕ ಹೆಚ್ಚುತ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕು ಹೊರತು ಪಡಿಸಿ ಉಳಿದ ತಾಲೂಕುಗಳಲ್ಲಿ ಸೋಂಕು ಗಣನೀಯ ಇಳಿಕೆ ಕಂಡಿದೆ. ಆದರೆ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ವಿನಃ ನಿಯಂತ್ರಣಕ್ಕೆ ಬರುತ್ತಿಲ್ಲ.