ಅಥಣಿ/ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್ ಉಲ್ಬಣಗೊಳ್ಳುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಅಥಣಿ ಚೆಕ್ಪೋಸ್ಟ್ ನಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ಗಡಿ ಹೊಂದಿರುವ ಮಹಾರಾಷ್ಟ್ರ, ಕರ್ನಾಟಕದ ಗಡಿ ರಸ್ತೆಗಳ ಚೆಕ್ಪೋಸ್ಟ್ ಗಳಲ್ಲಿ ಅಂತಾರಾಜ್ಯ ಪ್ರಯಾಣಿಕರನ್ನು ಪೋಲಿಸ್ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ.
ಜಿಲ್ಲಾಡಳಿತ ಅಥಣಿ ತಾಲೂಕಿನ ಬಳ್ಳಿಗೇರಿ, ಕೋಹಳ್ಳಿ, ಕೊಟ್ಟಲಗಿ, ರಾಮತೀರ್ಥ, ಗ್ರಾಮಗಳಲ್ಲಿ ಮಹಾರಾಷ್ಟ್ರ ಗಡಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚೆಕ್ಪೋಸ್ಟ್ಗಳನ್ನು ನಿರ್ಮಿಸಿ, ಸ್ಥಳದಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತಪಾಸಣಾ ಕಾರ್ಯ ನಡೆಸುತ್ತಿದ್ದಾರೆ.
ಅಂತಾರಾಜ್ಯ ಪ್ರಯಾಣಿಕರು 72 ಗಂಟೆಯ ಆರ್ಟಿಪಿಸಿಆರ್ ನೆಗೆಟಿವ್ ವರದಿ ಇದ್ದವರು ಮಾತ್ರ ಕರ್ನಾಟಕ ಗಡಿ ಪ್ರವೇಶಕ್ಕೆ ಪೊಲೀಸರು ಅವಕಾಶ ಮಾಡಿಕೊಡುತ್ತಿದ್ದಾರೆ. ಅಲ್ಲದೇ ನೆಗೆಟಿವ್ ರಿಪೋರ್ಟ್ ಇಲ್ಲದ ಪ್ರಯಾಣಿಕರನ್ನು ವಾಪಸ್ ಕಳುಹಿಸುತ್ತಿದ್ದಾರೆ.
ಕಟ್ಟುನಿಟ್ಟಿನ ಕ್ರಮಕ್ಕೆ ಡಿಸಿ ಹಿರೇಮಠ ಸೂಚನೆ:
'ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 23 ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಕೋವಿಡ್ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಚೆಕ್ಪೋಸ್ಟ್ ನಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದ್ದು, ಕೋವಿಡ್ ನಿರ್ವಹಣೆಗೆ ಎಲ್ಲ ಇಲಾಖೆಗಳ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ಹೊಸ ವರ್ಷಾಚರಣೆಗೆ ಗೋವಾಕ್ಕೆ ಹೋಗಿ ಬಂದ ಪ್ರವಾಸಿಗರ ಮೇಲೆ ನಿಗಾ ವಹಿಸಲಾಗಿದೆ. ಚೆಕ್ಪೋಸ್ಟ್ ನಲ್ಲಿ ಮಾಹಿತಿ ಸಂಗ್ರಹಿಸಿ, ಗೋವಾದಿಂದ ಮರಳಿದವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದರು.
ಇಂದಿನಿಂದ 15 ರಿಂದ 18 ವಯೋಮಾನದವರಿಗೆ ವ್ಯಾಕ್ಸಿನ್:
ಬೆಳಗಾವಿ ಜಿಲ್ಲೆಯಲ್ಲಿ 15 ರಿಂದ 18 ವಯೋಮಾನದ 3,01,277 ಮಕ್ಕಳಿದ್ದಾರೆ. ಇಂದಿನಿಂದ(ಜ.3) 178 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಡೋಸ್ ಕೋವ್ಯಾಕ್ಸಿನ್ ಲಭ್ಯವಿದೆ. ಸೋಮವಾರ ಮತ್ತೆ ಒಂದೂವರೆ ಲಕ್ಷ ಡೋಸ್ ಬರಲಿದೆ. ಮಕ್ಕಳಿಗೆ ಲಸಿಕೆ ನೀಡಲು ಪಾಲಕರು ವಿರೋಧಿಸಿದರೆ, ತಿಳಿವಳಿಕೆ ಮೂಡಿಸಲಾಗುವುದು. ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನೂ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಕೋವಿಡ್ ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ:
ಗಡಿ ತಾಲೂಕು ನಿಪ್ಪಾಣಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ನಿಪ್ಪಾಣಿಯಲ್ಲಿ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೊರೊನಾ ಮತ್ತು ಒಮಿಕ್ರಾನ್ ಕೇಸ್‍ಗಳು ಹೆಚ್ಚಾಗಿರುವ ಹಿನ್ನೆಲೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಾಲ ಕಾಲಕ್ಕೆ ಸ್ಯಾನಿಟೈಸರ್ ಬಳಸಬೇಕು. ಮಾಸ್ಕ್ ಧರಿಸದೇ ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮತ್ತೆ ಸಾವಿರ ಗಡಿ ದಾಟಿದ ಕೊರೊನಾ.. ರಾಜ್ಯದಲ್ಲಿಂದು 1187 ಮಂದಿಗೆ ಸೋಂಕು, 6 ಮಂದಿ ಬಲಿ