ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಅಲ್ಲದೆ ಕೃಷ್ಣಾ ನದಿಯಲ್ಲಿ 1,51,500 ಕ್ಯೂಸೆಕ್‌ಕ್ಕಿಂತ ಹೆಚ್ಚು ಒಳಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಸುಭಾಸ ಸಂಪಗಾಂವಿ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,21,000 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 30,800 ಕ್ಯೂಸೆಕ್ ನೀರು ಸೇರಿ ಒಟ್ಟು 1,51,500 ಕ್ಯೂಸೆಕ್ಗಿಂತಲೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ.
ಮಹಾರಾಷ್ಟ್ರದ ಕೊಯ್ನಾದಲ್ಲಿ- 153 ಮಿ.ಮೀ, ನವಜಾ - 106 ಮಿ.ಮೀ, ಮಹಾಬಲೇಶ್ವರ - 166 ಮಿ.ಮೀ, ವಾರಣಾ - 88 ಮಿ.ಮೀ, ಕಾಳಮ್ಮವಾಡಿ - 163 ಮಿ.ಮೀ, ರಾಧಾನಗರಿ - 148 ಮಿ.ಮೀ, ಪಾಟಗಾಂವ - 290 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.
ಇನ್ನು ಚಿಕ್ಕೋಡಿಯಲ್ಲಿ - 11.6 ಮಿ.ಮೀ, ಅಂಕಲಿ - 8.4 ಮಿ.ಮೀ, ನಾಗರಮುನ್ನೊಳಿ - 3.2 ಮಿ.ಮೀ, ಸದಲಗಾ - 10.0 ಮಿ.ಮೀ ಹಾಗೂ ಜೋಡಟ್ಟಿ - 3.4 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ಆದರೆ ನಿನ್ನೆಯ ವರದಿಗೆ ಹೋಲಿಸಿದರೆ ಚಿಕ್ಕೋಡಿ ಉಪವಿಭಾಗದಲ್ಲಿ ಅರ್ಧಕ್ಕಿಂತ ಕಡಿಮೆ ಮಳೆಯಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಕೃಷ್ಣಾ ನದಿ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದೆ. ಈಗಾಗಲೇ ಚಿಕ್ಕೋಡಿ ಉಪವಿಭಾಗದ 8 ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗದ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ನದಿ ನೀರಿನ ಮಟ್ಟದಲ್ಲಿ ಸತತ ಏರಿಕೆ ಹಿನ್ನೆಲೆಯಲ್ಲಿ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯಬಾಗ, ಅಥಣಿ ತಾಲೂಕಿನ ನದಿ ತೀರದಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.