ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಗೆ ಒಳಹರಿವು ಹೆಚ್ಚಾದ ಕಾರಣ 25 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ಪರಿಣಾಮ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಹೊರವಲಯದ ಸೆಟ್ಟೆಮ್ಮ ದೇವಸ್ಥಾನ ಮುಳುಗಡೆಯಾಗಿದೆ. ಕಳೆದ ವರ್ಷವೂ ಈ ದೇವಸ್ಥಾನ ಸಂಪೂರ್ಣ ಮುಳುಗಿತ್ತು. ಹಾಗೆಯೇ ಇಲ್ಲಿನ ಸುಲ್ತಾನಪುರದಿಂದ ದೇವಸ್ಥಾನಕ್ಕೆ ಬರಲು ತೂಗು ಸೇತುವೆ ನಿರ್ಮಿಸಲಾಗಿತ್ತು. ಆದರೆ ಕಳೆದ ವರ್ಷದ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ. ಅದರ ದುರಸ್ತಿ ಇನ್ನೂ ಮಾಡಿಲ್ಲ.
ಇದರಿಂದಾಗಿ ಸುಲ್ತಾನಪುರ ಗ್ರಾಮದ ಜನರು ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಇದಲ್ಲದೆ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆಗಳೆಲ್ಲವೂ ನೀರುಪಾಲಾಗಿವೆ. ಹೀಗಾಗಿ ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಪಕ್ಕದಲ್ಲಿರುವ ಸುನ್ನಾಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಚೇರಿ, ಬೀರಮಾರುತ್ತೇಶ್ವರ ದೇವಸ್ಥಾನ, ಶಾಲೆ ಸೇರಿದಂತೆ 25ಕ್ಕೂ ಹೆಚ್ಚಿನ ಮನೆಗಳು ಜಲಾವೃತವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.