ಬೆಳಗಾವಿ: ಪ್ರೀತಿ, ಮದುವೆ ಮತ್ತು ವಯಸ್ಸಿನ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ವಿಧಾನಸಭೆಯಲ್ಲಿ ಇಂದು ಹಾಸ್ಯ ಪ್ರಸಂಗ ನಡೆಯಿತು.
ಮತಾಂತರ ನಿಷೇಧ ವಿಧೇಯಕದಲ್ಲಿರುವ ಅಂಶಗಳನ್ನು ಸದನದಲ್ಲಿ ಉಲ್ಲೇಖ ಮಾಡುತ್ತಿದ್ದ ಸಿದ್ದರಾಮಯ್ಯ, ಉದಾಹರಣೆಗೆ ನಾನು ಲವ್ ಮಾಡಿ ಒಬ್ಬಳನ್ನು ಮದುವೆಯಾಗುತ್ತೇನೆ. ಬೇಡ XYZ ಅಂತ ಇಟ್ಕೊಳ್ಳಿ, ನನಗೆ ವಯಸ್ಸಾಗಿದೆ ಎಂದು ನಗೆ ಚಟಾಕಿ ಹಾರಿಸಿದರು. ಆಗ ವಯಸ್ಸಿಗೂ, ಪ್ರೀತಿಗೂ ಸಂಬಂಧ ಇಲ್ವಾ? ಎಂದು ಸ್ಪೀಕರ್ ಪ್ರಶ್ನೆ ಮಾಡಿದರು. ಇದಕ್ಕೆ ಸಿದ್ದರಾಮಯ್ಯನವರು ಪ್ರೀತಿ ಬೇರೆ, ಮದುವೆ ಬೇರೆ. ಪ್ರೀತಿ ಯಾವ ವಯಸ್ಸಿಗೂ ಮಾಡಬಹುದು. ಅದಕ್ಕೆ ಅಡ್ಡಿ ಇಲ್ಲ. ಪ್ರೀತಿಗೆ ವಯಸ್ಸಿಲ್ಲ, ಆದರೆ ಮದುವೆಗೆ ವಯಸ್ಸಿದೆ ಎಂದರು.
ಇದನ್ನೂ ಓದಿ: ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕಾಯ್ದೆ ಯಾವುದೇ ಧರ್ಮದ ವಿರುದ್ಧ ಇಲ್ಲ- ಗೃಹ ಸಚಿವ ಆರಗ ಜ್ಞಾನೇಂದ್ರ
ಈ ವೇಳೆ ಈಶ್ವರಪ್ಪನವರು ನಿಮಗೆ ವಯಸ್ಸಾಗಿದೆ ಎಂದು ಯಾರು ಹೇಳಿದರು? ನಿಮ್ಮ ಮನೆಯವರು ಹೇಳಿಲ್ಲ ಅಲ್ವಾ ಎಂದು ಪ್ರಶ್ನಿಸಿದರು. ಆಗ ಸಿದ್ದರಾಮಯ್ಯ, ನಾನೇ ಹಾಗೆ ಅಂದ್ಕೊಂಡಿದೀನಿ ನಿಮಗೇನಾದರೂ ಅನ್ನಿಸಿದ್ಯಾ ಹಂಗೆ? ಎಂದು ಮರು ಪ್ರಶ್ನೆ ಮಾಡಿದರು. ಯಾವ ಕಾರಣಕ್ಕೂ ಇಲ್ಲ ಎಂದು ಈಶ್ವರಪ್ಪ ಹೇಳಿದರು.