ಬೆಳಗಾವಿ: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸಿಎಂ ರಾಜೀನಾಮೆ ನೀಡಿರುವುದು ದುರ್ದೈವದ ಸಂಗತಿ. ಆದ್ರೆ, ಯಡಿಯೂರಪ್ಪನವರನ್ನ ಹೆದರಿಸಿ ರಾಜೀನಾಮೆ ಕೊಡಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂರನ್ನ ತೆಗೆಯೋದು ಗ್ಯಾರಂಟಿ ಆಗಿತ್ತಲ್ಲಾ ಇನ್ನೊಂದ ವಾರ, ಹದಿನೈದು ದಿವಸ ಬಿಟ್ಟ ತೆಗೀಬೇಕಿತ್ತು. ಇಲ್ಲಾ ಪ್ರವಾಹ ಮುಗಿದ್ಮೇಲೆ ತೆಗೀಬೇಕಿತ್ತು.
ಯಡಿಯೂರಪ್ಪ ರಾಜೀನಾಮೆ ಕೊಟ್ಟಾಯ್ತು, ಕೇರ್ ಟೇಕರ್ ಸಿಎಂ ಆಗಿ ಮುಂದುವರಿದಿದ್ದಾರೆ. ಬೇರೊಬ್ಬ ಸಿಎಂ ಆಗಬೇಕು. ಈಗ ಮಂತ್ರಿಮಂಡಲವೇ ಇಲ್ಲ. ಆದ್ರೆ, ಯಡಿಯೂರಪ್ಪರನ್ನು ಹೆದರಿಸಿ ರಾಜೀನಾಮೆ ಕೊಡಿಸಲಾಗಿದೆ ಎಂದರು.
ಮಲಪ್ರಭಾ ನದಿ ಪ್ರವಾಹದಿಂದ ಬಾದಾಮಿ ಕ್ಷೇತ್ರದಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದೆ. ಅದರ ವೀಕ್ಷಣೆಗೆ ಇಂದು ಹೋಗಿದ್ದೆ. ನಾಳೆ ಖಾನಾಪುರ, ಸಂಕೇಶ್ವರ, ಯಮಕನಮರಡಿ, ಗ್ರಾಮಿಣ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ.
ಆಗಸ್ಟ್ 1ಕ್ಕೆ ಕಾರವಾರ ನೆರೆ ಪೀಡಿತ ಪ್ರದೇಶಗಳಿಗೆ ಪರಿಶೀಲನೆ ಮಾಡುತ್ತೇನೆ. ಬಾದಾಮಿಯಲ್ಲಿ ಗ್ರಾಮಗಳಿಗೆ ನೀರು ನುಗ್ಗಿಲ್ಲ. ಜಮೀನಿನುಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿ ಆಗಿದೆ. ಈ ಬಗ್ಗೆ ಸರ್ವೇ ಮಾಡಲು ತಹಶೀಲ್ದಾರ್ಗೆ ಮತ್ತು ಡಿಸಿಗೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಪ್ರವಾಹ ಬಂದಿಲ್ಲ ಎಂಬ ಉಸ್ತುವಾರಿ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಮೀನಾಮೇಷ ನಡೆಸದೇ ಪರಿಹಾರ ಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಠಿಕಾಣಿ ಹೂಡಬೇಕು. ಪ್ರತಿನಿತ್ಯ ಏನ್ ಆಗ್ತಿದೆ ಅನ್ನೋದನ್ನ ನೋಡಬೇಕು. ಪ್ರವಾಹ ಬಂದಿಲ್ಲ ಅಂತಾ ಹೇಳೋದು ಬೇಜವಾಬ್ದಾರಿ ಹೇಳಿಕೆ ಎಂದು ಕಿಡಿಕಾರಿದರು.
ಜಿಲ್ಲೆಗೆ ಯಡಿಯೂರಪ್ಪ ಏನು ಶೋಕಿ ಮಾಡಲಿಕ್ಕೆ ಬಂದಿದ್ರಾ?.. ಕತ್ತಿ, ಸವದಿ, ಕಾರಜೋಳ, ಆರ್.ಅಶೋಕ್ ಅವರೆಲ್ಲ ಪ್ರವಾಹ ಬಂದಿಲ್ಲ ಅಂದ್ಮೇಲೆ, ಇಲ್ಲಿಗೆ ಯಾಕೆ ಬಂದ್ರಿ ಅಂತಾ ಕೇಳಬೇಕಿತ್ತು. ಪಾಪ ಸಿಎಂ ಬಿಎಸ್‌ವೈ ಇವತ್ತು ಹೋಗ್ತಿದ್ದರಲ್ಲ ಅದಕ್ಕೆ ನಿನ್ನೆ ಕಾಟಾಚಾರಕ್ಕೆ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.