ಬೆಳಗಾವಿ: ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಭಾರತ ಮೂರನೇ ಮಹಾಯುದ್ಧ ಎದುರಿಸಿದ ಪರಿಸ್ಥಿತಿ ಅನುಭವಕ್ಕೆ ಬಂದಂತಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.ಗೋಕಾಕ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ರಾಕೆಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನೀಡಿದ ಐಸಿಯು ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಮಹತ್ವದ ಪಾತ್ರ ವಹಿಸಿದೆ.
ಕೊರೊನಾ ಹೋಗಲಾಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ದೇಶದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಭಾರತ ಮೂರನೇ ಮಹಾಯುದ್ದವನ್ನು ಎದುರಿಸಿದ ಪರಿಸ್ಥಿತಿ ಅನುಭವಕ್ಕೆ ಬಂದಂತಾಗಿದೆ ಎಂದರು.
ಓದಿ: CD case: ಎಫ್ಐಆರ್ ಪ್ರಶ್ನಿಸಿ ಯುವತಿ ಅರ್ಜಿ.. ಜಾರಕಿಹೊಳಿಗೆ ಹೈಕೋರ್ಟ್ ನೋಟಿಸ್
ತಜ್ಞರು ಹೇಳುವಂತೆ ಮೂರನೇ ಅಲೆ ಬರುವ ಮುನ್ಸೂಚನೆ ಇದೆ. ಹೀಗಾಗಿ ಜನರು ಯಾವುದೇ ಕಾರಣಕ್ಕೂ ಮೈಮರೆಯದೇ ಮೂರನೇ ಅಲೆಯನ್ನು ಎದುರಿಸಲು ನಾವು ಈಗಿನಿಂದಲೇ ತಯಾರಿ ನಡೆಸಬೇಕಾಗಿದ್ದು, ನಾನು ಹಾಗೂ ನನ್ನ ಕುಟುಂಬ ಆರೋಗ್ಯ ಇಲಾಖೆ ಪರವಾಗಿರುವುದರ ಜೊತೆಗೆ ವೈದ್ಯರಿಗೆ ಅಗತ್ಯ ಸಹಕಾರ ಕೊಡುತ್ತೇವೆ ಎಂದರು.
ಇದಲ್ಲದೇ ಪುರಸಭೆ ವ್ಯಾಪ್ತಿಯಲ್ಲಿರುವ ಈ ಸರ್ಕಾರಿ ಆಸ್ಪತ್ರೆ ಹಳೆಯದಾಗಿರುವ ಕಾರಣಕ್ಕೆ ಈಗಾಗಲೇ ಆರೋಗ್ಯ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಅವರನ್ನ ಭೇಟಿಯಾಗಿ ನೂತನ ಆಸ್ಪತ್ರೆಗೆ ಅನುಮೋದನೆ ಕೊಡುವಂತೆ ಮನವಿ ಮಾಡಿಕೊಂಡಿದ್ದೇನೆ. ಸಚಿವರು ಒಪ್ಪಿಗೆ ಸೂಚಿಸಿದ್ದು, ಆದಷ್ಟು ಬೇಗ ಆಸ್ಪತ್ರೆಗೆ ಕಾಮಗಾರಿ ಆರಂಭವಾಗಲಿದೆ ಎಂದರು.
ಗೋಕಾಕ ಸರ್ಕಾರಿ ಆಸ್ಪತ್ರೆಗೆ ರಾಜ್ಯದಲ್ಲೇ ಉತ್ತಮ ಹೆಸರಿದೆ. ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಿಟ್ಟು ಸೋಂಕಿತರು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಪರಿಶ್ರಮಕ್ಕೆ ಇದೇ ಸಾಕ್ಷಿಯಾಗಿದೆ. ಗೋಕಾಕ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎನ್ನುವ ಮೂಲಕ ವೈದ್ಯರ ಸೇವೆಗೆ ರಮೇಶ ಮೆಚ್ಚುಗೆ ವ್ಯಕ್ತಪಡಿಸಿದರು.