ಬೆಳಗಾವಿ : ಕೃಷಿ ಸಚಿವ ತೋಮರ್, ಅಮಿತ್ ಶಾ, ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು ಪ್ರತಿದಿನ ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಕೂಡಲೇ ಕೃಷಿ ಕಾಯ್ದೆ ವಾಪಸ್ ಪಡೆಯಬೇಕು ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದರು.
ತಾಲೂಕಿನ ಸ್ವಗ್ರಾಮ ಚಿಕ್ಕಬಾಗೇವಾಡಿಯಲ್ಲಿ ರೈತರೊಂದಿಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿದ್ದಾಗ ಕೃಷಿ ಕಾಯ್ದೆ ಬಗ್ಗೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಖುದ್ದಾಗಿ ನೋಡಿದ್ದೇನೆ.
ಅರ್ಥ ಮಾಡಿಕೊಂಡಿದ್ದೇನೆ. ಅದರ ಅನುಭವ ಇದೆ. ಸಾಕಷ್ಟು ಹಳ್ಳಿಗಳಿಗೆ ತೆರಳಿ ಪರಿಶೀಲನೆಯನ್ನೂ ಮಾಡಿದ್ದೇನೆ. ಈ ಕಾಯ್ದೆಗಳಿಂದ ರೈತರು ಗುಲಾಮರಾಗುತ್ತಾರೆ ಎಂದು ಆರೋಪಿಸಿದರು.
ಸಚಿನ ತೆಂಡೂಲ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿನ್ ತೆಂಡೂಲ್ಕರ್ ಸೇರಿದಂತೆ ಪದ್ಮಭೂಷಣ ಪ್ರಶಸ್ತಿ ಪಡೆದವರು ರೈತರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ನಾನೇ ನಮ್ಮ ಸ್ವಂತ ಜಮೀನು ಕೊಡುತ್ತೇನೆ. ಜೊತೆಗೆ ಎಮ್ಮೆ, ಎತ್ತುಗಳನ್ನು ಕೊಡಿಸುತ್ತೇನೆ. ಅವರು ಐದು ವರ್ಷಗಳ ಕಾಲ ಒಕ್ಕಲುತನ ಮಾಡಬೇಕು. ಆಮೇಲೆ ಬೇಕಾದ್ರೆ ಕೃಷಿ ಕಾಯ್ದೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಲಿ ಎಂದು ಸವಾಲು ಹಾಕಿದರು.
ರೈತರು ಬಡವರಾಗಿ ಬಾಳುತ್ತಾರೆ. ಆದ್ರೆ, ಗುಲಾಮರಾಗಿ ಬಾಳುವುದಿಲ್ಲ. ರಾಜಕಾರಣಿಗಳ ಹಾಗೇ ರೈತರು ನಾಚಿಕೆಗೆಟ್ಟ ಜನರಲ್ಲ. ಭಾರತದ ಅಭಿವೃದ್ಧಿ ಸಹಿಸಲಾರದೆ ವಿದೇಶಿಗರು ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ.
ಆದ್ರೆ, ದೇಶದಲ್ಲಿ ಯಾರ ಅಭಿವೃದ್ಧಿ ಆಗಿದೆ?. ಅಂಬಾನಿ ಅವರದ್ದು ಲಾಕ್ಡೌನ್ ಅವಧಿಯಲ್ಲಿ ಅಂದ್ರೆ 827 ದಿನದಲ್ಲಿ 3 ಲಕ್ಷ ಕೋಟಿ ಏರಿಕೆ ಆಗಿದೆ. ಇದು ನಿಜವಾದ ಅಭಿವೃದ್ಧಿಯಾ?. ದೇಶದಲ್ಲಿ ಅಪೌಷ್ಟಿಕತೆಯಿಂದ ಎಷ್ಟು ಜನರು ಸಾವನ್ನಪ್ಪುತ್ತಿದ್ದಾರೆ ಎಂಬುವುದನ್ನು ನಾವು ಕೇಳುತ್ತಿದ್ದೇವೆ ಎಂದರು.