ಅಥಣಿ : ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಹಕ್ಕನ್ನು ಸರ್ಕಾರ ನೀಡಿದೆ. ಇದನ್ನು ವಿರೋಧಿಸಿ ಕೆಲವರು ಇಂದು ಭಾರತ್ ಬಂದ್ ಮಾಡಿದ್ದಾರೆ. ಇದು ತಪ್ಪು ಕಲ್ಪನೆ ಎಂದು ಮಾಜಿ ಉಪಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ರೈತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಾಲ ವಿತರಣೆ ಸಮಾರಂಭ ಕಾರ್ಯಕ್ರಮದ ಬಳಿಕ ಈಟಿವಿ ಭಾರತದ ಜತೆ ಅವರು ಮಾತನಾಡಿದರು.
ಸರ್ಕಾರ ರೈತರಿಗೆ ಅನುಕೂಲ ಮಾಡಲೆಂದು ಕೃಷಿ ಕಾನೂನು ವಿಧೇಯಕ ತಿದ್ದುಪಡಿ ಮಾಡಿದೆ. ರೈತ ತಾನು ಬೆಳೆದ ಬೆಳೆ ಮಾರಾಟ ಮಾಡಲು ಸ್ವಾಯತ್ತತೆ ಇದೆ. ಕರ್ನಾಟಕದಲ್ಲಿ 2008ರಿಂದ ಈ ಕಾನೂನು ರೂಪಿಸಲಾಗಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಈ ಕಾನೂನಿಗೆ ತಿದ್ದುಪಡಿ ಮಾಡಿದೆ.
ಹರಿಯಾಣ, ಉತ್ತರಪ್ರದೇಶ, ಝಾರ್ಖಂಡ್ ರಾಜ್ಯದಲ್ಲಿ ದಲ್ಲಾಳಿಗಳು ರೈತರನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದು, ಈ ಕೃಷಿ ಕಾನೂನಿಂದ ದಲ್ಲಾಳಿಗಳಿಗೆ ನಷ್ಟ ಸಂಭವಿಸಿದ ಪರಿಣಾಮ ಈ ಕಾನೂನಿನ ಬಗ್ಗೆ ರೈತರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಸವದಿ ಆರೋಪಿಸಿದರು.
ಕೃಷಿ ಕಾನೂನು ಬಗ್ಗೆ ಬಹಿರಂಗ ಚರ್ಚೆಗೆ ಬರಲಿ : ಕೃಷಿ ಕಾನೂನು ತಿದ್ದುಪಡಿ ರೈತರಿಗೆ ನಷ್ಟ ಸಂಭವಿಸುತ್ತದೆ ಎಂದು ಯಾರಾದರೂ ಸಾಬೀತು ಪಡಿಸಿದರೆ ನಾವು ಈ ಕಾನೂನು ಹಿಂಪಡೆಯಲು ಸಿದ್ದರಿದ್ದೇವೆ. ಯಾರು ಈ ಕಾನೂನು ವಿರೋಧ ಪಡಿಸುತ್ತಾರೆ ಅವರು ಬಹಿರಂಗವಾಗಿ ಚರ್ಚೆಗೆ ಬರುವಂತೆ ಮಾಜಿ ಉಪ ಉಪಮುಖ್ಯಮಂತ್ರಿ ಸವದಿ ಸವಾಲು ಎಸೆದರು.
ಆರ್ಎಸ್ಎಸ್ ನಮ್ಮ ಗುರುವಿನ ಸ್ಥಾನದಲ್ಲಿದೆ : ಇತ್ತೀಚೆಗೆ ವಿಪಕ್ಷದ ನಾಯಕ ಸಿದ್ದರಾಮಯ್ಯ, ಸರ್ಕಾರ ಆರ್ಎಸ್ಎಸ್ ಹೇಳಿದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸವದಿ, ಹೌದು. ಆರ್ಎಸ್ಎಸ್ ಎಂಬುವುದು ನಮ್ಮ ಗುರುವಿನ ಸ್ಥಾನದಲ್ಲಿದೆ. ನಮ್ಮ ಬೆನ್ನಿಗೆ ನಿಂತಿರುವುದು ಆರ್ಎಸ್ಎಸ್.
ದೇಶದಲ್ಲಿ ಬಲಿಷ್ಠ ಸಂಘಟನೆಯಾಗಿದೆ. ದೇಶ ಪ್ರೇಮ, ಸ್ವಾಭಿಮಾನ ಎತ್ತಿಹಿಡಿಯುವ ಸಂಘಟನೆ. ದೇಶಕ್ಕೆ ಪ್ರಾಣವನ್ನು ಕೊಡುತ್ತದೆ. ಲಕ್ಷಾಂತರ ಕಾರ್ಯಕರ್ತರು ಹೊಂದಿರುವ ಸಂಘಟನೆ. ಆರ್ಎಸ್ಎಸ್ ಸಂಘಟನೆ ಆನೆ ಬಲ ಹೊಂದಿದೆ. ನಮ್ಮ ಹಿಂದೆ ಇರುವುದು ನಮಗೆ ಹೆಮ್ಮೆಯೆ ಇದೆ. ಸಿದ್ದರಾಮಯ್ಯ ಅವರು ಹೇಳಿದ್ದು ನಿಜ ಎಂದರು.
ಕೃಷ್ಣಾ ನದಿ ನೆರೆ ಸಂತ್ರಸ್ತರ ಪರಿಹಾರ ವಿಚಾರ : ಕಳೆದ ತಿಂಗಳು ಕೃಷ್ಣ ನದಿ ಪ್ರವಾಹದಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಹಣ ಕೆಲವು ಕಡೆ ಸರಿಯಾಗಿ ವಿತರಣೆ ಆಗಿಲ್ಲ. ನಿನ್ನೆ ಬೆಳಗಾವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂದಾಗ ಜಿಲ್ಲಾಧಿಕಾರಿ ಜತೆ ಚರ್ಚೆ ಮಾಡಿದ್ದಾರೆ.
ಇನ್ನುಳಿದ ನೆರೆ ಸಂತ್ರಸ್ತರಿಗೆ ತುರ್ತು ಹತ್ತು ಸಾವಿರ ರೂ. ಪರಿಹಾರ, ಮನೆ ಹಾಗೂ ಬೆಳೆ ಪರಿಹಾರ ನಿಡುವಂತೆ ಬೆಳಗಾವಿ ಡಿಸಿ ಅವರಿಗೆ ತಿಳಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪರಿಹಾರ ವಿತರಣೆಯಾಗುತ್ತದೆ ಎಂದು ಭರವಸೆ ನೀಡಿದರು.